Tag Archives: ಕಲ್ಪೆನಿ

ಲಕ್ಷ ದ್ವೀಪಗಳ ಮಹಾ ಯಾನ – ೧೬ – ಕಲ್ಪನಾತೀತ ಕಲ್ಪೆನಿ

ಅದಾಗಲೇ ದೋಣಿ ಅಗಟ್ಟಿಯಿಂದ ಸುಮಾರು ಅರ್ಧ ಪರ್ಲಾಂಗ್ ದೂರ ಸಾಗಿತ್ತು. ಅಗಟ್ಟಿ ಜಟ್ಟಿಯಿಂದ ನಮ್ಮ ಕವರತ್ತಿ ನಾವೆ ಕಡೆಗೆ ಹೋಗುತ್ತ ಇದ್ದಾಗ ತಕ್ಷಣ ನೆನೆಪಿಗೆ ಬಂದಿದ್ದು ನಾವು ಕಿನಾರೆಯಲ್ಲಿ ಇಟ್ಟಿದ್ದ ನಮ್ಮ ಸಾಮಾನು ಸರಂಜಾಮುಗಳ ಬಗ್ಗೆ. ತಕ್ಷಣ ನಮ್ಮ ಪರಿಕರಗಳು ಸರಿ  ಇವೆಯಾ ಎಂದು ಪರೀಕ್ಷಿಸಿದ ಮೇಲೆ ಮೂಡಿದ ಭಾವನೆ ಲಕ್ಷದ್ವೀಪದ ನಾಗರಿಕರು ನಿಜವಾಗಿಯೂ ಗೌರವಕ್ಕೆ ಅರ್ಹರು ಎಂಬುದು.  ಇಲ್ಲಿ ಕಳ್ಳತನ ಎಂಬುವ ಪದಕ್ಕೆ  ಬಹುಶ  ಸ್ಥಾನವೇ  ಇಲ್ಲ. ಭಾರತ ಭೂಪ್ರದೇಶದಿಂದ ಬಹು ದೊರದಲ್ಲಿದ್ದರು ಅಗಟ್ಟಿ ದ್ವೀಪದಲ್ಲಿದ್ದ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಮಹಾ ಅಪರಾಧ ಎನ್ನುವ ಕೇಸ್ಗಳು ಇಲ್ಲದೇ ಆರಕ್ಷಕರು ಸಹ ಆರಾಮಾಗಿದ್ದರು. ಏನೇ ವ್ಯಾಜ್ಯಗಳಿದ್ದರು ತಮ್ಮ ತಮ್ಮಲ್ಲಿಯೇ ಕುಳಿತು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳುತ್ತಿದ್ದರು. ಹಾಗಾಗಿ ಇಲ್ಲಿ ದೊಡ್ಡ ಮಟ್ಟದ ಅಪರಾಧಗಳು ಇಲ್ಲವೇ ಇಲ್ಲ.  ನಾವು ಕವರಟ್ಟಿ ನಾವೇಯ ಎಂಬಾರ್ಕೇಷನ್ ಬಾಗಿಲ ಮೂಲಕ ಮತ್ತೆ ಸಾಗಿ ನಮ್ಮ ಕ್ಯಾಬಿನ್ ಕಡೆಗೆ ಹೆಜ್ಜೆ ಹಾಕಿದೆವು. ನಾಳೆ ನಾವು ಕಲ್ಪೆನಿ ದ್ವೀಪಕ್ಕೆ ತಸು ಬೇಗ  ಭೇಟಿ ನೀಡುತ್ತಿದ್ದರಿಂದ ನಮ್ಮ ನಾಳೆಯ ಪರಿಕರಗಳನ್ನು ಹೊಂದಿಸಿ, ಅಂದಿನ ಊಟ ಮುಗಿಸಿ ಬೇಗನೆ ನಿದ್ದೆಗೆ ಜಾರಿದೆವು. 

ಕಲ್ಪೇನಿ ದ್ವೀಪವು ಭಾರತದ ನೈಋತ್ಯ ಕರಾವಳಿಯ ಲಕ್ಷದ್ವೀಪದ ಪ್ರಾಚೀನ ದ್ವೀಪಸಮೂಹದಲ್ಲಿ ನೆಲೆಸಿರುವ ಸ್ವರ್ಗವಾಗಿದೆ. ಸ್ಫಟಿಕದಷ್ಟು  ಸ್ಪಷ್ಟ ವೈಡೂರ್ಯದ ಸಾಗರದ ನೀರು, ಪುಡಿ ಬಿಳಿ ಮರಳು ಮತ್ತು ಹೇರಳವಾದ ಸಮುದ್ರ ಜೀವಿಗಳೊಂದಿಗೆ, ಕಲ್ಪೇನಿ ದ್ವೀಪವು ಪ್ರಕೃತಿ ಪ್ರಿಯರಿಗೆ ಮತ್ತು ಕಡಲತೀರದ ಉತ್ಸಾಹಿಗಳಿಗೆ ಪ್ರಶಾಂತ ಮತ್ತು ರಮಣೀಯ ವಿಹಾರವನ್ನು ನೀಡುತ್ತದೆ. ಈ ದ್ವೀಪವು ತಿಲಕ್ಕಂ ಮತ್ತು ಪಿಟ್ಟಿಯ ಎರಡು ಸಣ್ಣ ದ್ವೀಪಗಳೊಂದಿಗೆ ಮತ್ತು ಉತ್ತರದಲ್ಲಿ ಜನವಸತಿಯಿಲ್ಲದ ಚೆರಿಯಮ್ ದ್ವೀಪವು ಒಂದೇ ಹವಳದ ದಿಣ್ಣೆಯನ್ನು ಹೊಂದಿದೆ. ಕಲ್ಪೇನಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಪೂರ್ವ ಮತ್ತು ಆಗ್ನೇಯ ತೀರದಲ್ಲಿ ಹವಳದ ಅವಶೇಷಗಳ ಬೃಹತ್ ಚಂಡಮಾರುತದ ದಂಡೆ. ಹಾಗಾಗಿ ಇಲ್ಲಿ ಬರಿಗಾಲಿನಲ್ಲಿ ನಡೆಯುವುದು ಕಷ್ಟಕರ ಮತ್ತು ತಸು ಅಪಾಯಕಾರಿ ಕೂಡ ಹೌದು. ಅಪ್ಪಿತಪ್ಪಿ ಕೋರಲ್ ಕಾಲಿಗೆ ಏನಾದರೂ ಚುಚ್ಚಿದರೆ ಅಂದಿನ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಂತೆ.  ಹಾಗಾಗಿ ನಮ್ಮ ಟೂರ್ ಮ್ಯಾನೇಜರ್ ಮುಂಚೆಯೇ ತಿಳಿಸಿದ್ದರು ಡೇಡ್ ಕೋರಲ್ಗಳು  ಅಗಾಧವಾಗಿ ಇವೆ ನೀರಿನಲ್ಲಿ ಇಳಿಯುವಾಗ ಪಾದುಕೆಗಳನ್ನು ಧರಿಸಿ ಎಂದು. ೧೮೪೭ ರಲ್ಲಿ ರಣ ಭಯಂಕರವಾದ ಚಂಡಮಾರುತವು ಈ ತೀರದಲ್ಲಿ ಬೃಹತ್ ಹವಳದ ಬಂಡೆಗಳನ್ನು ಎಸೆದಿದೆ ಎಂದು ನಂಬಲಾಗಿದೆ. ಬೇರೆಯಲ್ಲ ದ್ವೀಪಗಳಿಗೆ ಹೋಲಿಸಿದರೆ ಕಲ್ಪೆನಿ ಸಾಮಾಜಿಕವಾಗಿ ಪ್ರಗತಿಪರ ದ್ವೀಪವಾಗಿದೆ ಎಂದು ಹೇಳಬಹುದು. ಒಮ್ಮೆ ಮಹಿಳಾ ಶಿಕ್ಷಣವನ್ನು ನಿಷೇಧಿಸಿದಾಗ, ನಿಷೇಧವನ್ನೇ ಬಹಿಷ್ಕರಿಸಿ  ಹೆಣ್ಣು ಮಕ್ಕಳು  ಬಂಡೆದ್ದು ಮೊದಲು ಶಾಲೆಗೆ ಹೋಗುತ್ತಿದ್ದರು ಎಂದು ಕೇಳಿದಾಗ ನಂಬಲು ಆಗಲಿಲ್ಲ.  ನಮ್ಮ ರಾಜ್ಯದಲ್ಲಿ ಒಮ್ಮೆ ಸರ್ಕಾರ  ಹಿಜಾಬ್  ಬ್ಯಾನ್ ಮಾಡಿದಾಗ ನಮ್ಮ ಕೆಲವು ಹೆಣ್ಣು ಮಕ್ಕಳು  ಪರೀಕ್ಷೆಯನ್ನೇ ಬಹಿಷ್ಕರಿಸಿದ್ದು ನೆನಪಿಗೆ ಬಂತು, ಎತ್ತಣ ಕಲ್ಪೆನಿ ಎತ್ತಣ ಕರ್ನಾಟಕ..

ಹಾಗಾಗಿ ಕಲ್ಪೆನಿಯ ಹೆಣ್ಣು ಮಕ್ಕಳು ನಿಜಕ್ಕೂ ಆಧುನಿಕ ಯುಗದಲ್ಲಿಯೂ ಸಹ ನಮಗೆ ಶಿಕ್ಷಣ ಮುಖ್ಯ ಎಂದು ಸಾರುವ ಪ್ರಬುದ್ಧ ಪ್ರಗತಿ ಪರರು ಎನ್ನಬಹುದು. 

ಕಲ್ಪೆನಿಗೆ ಕಾಲಿಡುತ್ತಿದ್ದಂತೆ ಅನುಭವಕ್ಕೆ ಬಂದಿದ್ದು ಬೆರಗುಗೊಳಿಸುವ ಹವಳದ ಬಂಡೆಗಳು ಮತ್ತು ರೋಮಾಂಚಕ ಸಮುದ್ರ ಪರಿಸರ ವ್ಯವಸ್ಥೆ. ಬೇರೆ ದ್ವೀಪಕ್ಕಿಂತ ಇದೊಂದು ಭಿನ್ನ ಮತ್ತು ಅದ್ಭುತ ಲೋಕಕ್ಕೆ ಕರೆದೊಯುತ್ತದೆ . ತಾಳೆಗರಿಗಳಿಂದ ಕೂಡಿದ ಕಡಲತೀರಗಳು, ಮೃದುವಾಗಿ ತೂಗಾಡುವ ತೆಂಗಿನ ಮರಗಳು ಮತ್ತು ಹಿಂದೂ ಮಹಾಸಾಗರದ ಬೆಚ್ಚಗಿನ ಅಪ್ಪುಗೆಯಿಂದ ದ್ವೀಪವು ನಿಮ್ಮನ್ನು ಸ್ವಾಗತಿಸಲಾಗುತ್ತದೆ. ದ್ವೀಪದ ನೈಸರ್ಗಿಕ ಸೌಂದರ್ಯವು  ಎಂತಹವರನ್ನು ಮಂತ್ರ ಮುಗ್ಧಗೊಳಿಸುತ್ತದೆ. 

ಕಲ್ಪೇನಿ ದ್ವೀಪವು ಕಲ್ಪೇನಿ ಲಗೂನ್ ಎಂದು ಕರೆಯಲ್ಪಡುವ ಪ್ರಶಾಂತವಾದ ಆವೃತ ಪ್ರದೇಶಕ್ಕೆ ನೆಲೆಯಾಗಿದೆ. ಇದು ನೈಸರ್ಗಿಕ ಅದ್ಭುತವಾಗಿದೆ. ಆವೃತ ಪ್ರದೇಶದ ಶಾಂತ ಮತ್ತು ಆಳವಿಲ್ಲದ ನೀರು ಈಜು, ಕಯಾಕಿಂಗ್ ಮತ್ತು ಇತರ ನೀರಿನ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು  ಅನ್ನು ಒದಗಿಸುತ್ತದೆ. ಪ್ರಶಾಂತವಾದ ನೀರಿನ  ಮೇಲ್ಮೈಯಲ್ಲಿ ವಿಹರಿಸಿದರೆ ನೀರಿನ ಸ್ಪಷ್ಟತೆಗೆ ಆಶ್ಚರ್ಯಚಕಿತರಾಗಿ ಮತ್ತು ಸುತ್ತಮುತ್ತಲಿನ ಸಂಪೂರ್ಣ ಸೌಂದರ್ಯದಲ್ಲಿ ನಿಮ್ಮನ್ನು ಮುಳುಗಿಸಿ ಬಿಡುತ್ತದೆ ಈ ಕಲ್ಪೆನಿ ಎಂಬ ಮಾಯಾಂಗನೆ. 

ನಮ್ಮನ್ನು ಕಲ್ಪೆನಿಯ  ದ್ವೀಪದಲ್ಲಿರುವ “ಕೂಮೆಲ್ ಬೀಚ್ ರೆಸಾರ್ಟ್” ಗೆ ಕರೆತಂದು. ಅಲ್ಲಿನ ಎಳೆನೀರನ್ನು ವೆಲ್ ಕಮ್ ಡ್ರಿಂಕ್ ಆಗಿ ಮೊದಲ ಬಾರಿಗೆ ಕೊಟ್ಟರು  ಯಾಕೋ ಎಳೆನೀರು ಅಷ್ಟಾಗಿ ರುಚಿಸಲಿಲ್ಲ. ಅಲ್ಲಿಂದ ಸಮುದ್ರ ಮೇಲೆ ಕಟ್ಟಿದ ತೇಲಾಡುವ ಸೇತುವೆಯ ಮೇಲೆ ನಿಲ್ಲುತ್ತಿದಂತೆ ಕಂಡಿದ್ದು ಅಗಾಧವಾದ ಸಾಗರದಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತಿದ್ದ ಭಾರಿ ಗಾತ್ರದ ಕಡಲಾಮೆಗಳು. ನಮ್ಮನ್ನು ನೋಡುತ್ತಿದ್ದಂತೆ ಅವುಗಳ ಪ್ರಶಾಂತತೆಗೆ ಭಂಗವಾಗಿ ಅಲ್ಲಿಂದ್ದ ಒಂದೊಂದಾಗಿ ಕಾಲ್ಕಿಳಲು ಆರಂಭಿಸಿದವು ಆದರೂ ನಾವುಗಳು ಅವುಗಳನ್ನು ಬಿಡದೆ ಕ್ಯಾಮರಾದಲ್ಲಿ ಸೆರೆ ಮಾಡಿದ್ದೆ ಮಾಡಿದ್ದೂ. ಅದಲ್ಲದೆ ಕೆಲವೊಂದು ಬಣ್ಣದ ಮೀನುಗಳು ಹಾಗು ಸಮುದ್ರ ಸೌತೆಕಾಯಿ ಜೇವಿಗಳು ಭಾರಿ ಪ್ರಮಾಣದಲ್ಲಿ ಕಂಡು ಬಂದವು. 

ಅಲ್ಲಿಂದ ಕಾಣುವ ಪಿಟ್ಟಿ ದ್ವೀಪದ ದೃಶ್ಯ ಮಾತ್ರ ಎಂದೂ ಮರೆಯಲಾಗದ ದೃಶ್ಯ. ನಮಗಾಗಿ ಪಿಟ್ಟಿ ದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ಆಯೋಜಿಸಿದ್ದರು ಹಾಗಾಗಿ ಬೀಚ್ ರೆಸಾರ್ಟ್ ಇಂದ ಮತ್ತೊಂದು ದೋಣಿ ಬಳಸಿ ನಾವು ಹೋಗಬೇಕಿತ್ತು. ಹಾಗಾಗಿ ನಾವು ಮೋಟಾರು ದೋಣಿ ಏರಿ ಸಾಗುತ್ತಿದ್ದಂತೆ  ಸಾಗರದ ಅಡಿಯ ತುಂಬಾ ಸಮುದ್ರ ಸೌತೆಕಾಯಿಗಳೇ ಕಂಡು ಬಂದವು. ಪಿಟ್ಟಿ ದ್ವೀಪದಲ್ಲಿ ಸ್ನಾರ್ಕೆಲ್‌ ಕಿಟ್ ನೀಡಿದರು. ಈ ಪಿಟ್ಟಿ ದ್ವೀಪದಲ್ಲಿ ಜನವಸತಿಯಿಲ್ಲ, ಸಾಗರದ  ಉಬ್ಬರವಿಳಿತವಿದ್ದಲ್ಲಿ ಸಂಪೂರ್ಣವಾಗಿ ಮುಳುಗುವ ಪಿಟ್ಟಿ ದ್ವೀಪವನ್ನು ಸುತ್ತುವರಿದ ಕೋರಲ್ಗಳು ಹಾಗು ದಡದ ತುಂಬಾ ಬಿದ್ದಿರುವ ಅಲಂಕಾರಿಕ ನಿರ್ಜಿವ ಕೋರಲ್ಗಳು. ನಾವೆಲ್ಲರೂ ಸ್ರೋಕೆಲ್ಲಿಂಗ್ ಮರೆತು ಒಂದೊಂದಾಗಿ ಸಿಕ್ಕ ಬಣ್ಣ ಬಣ್ಣದ ವಿವಿಧ ರೀತಿಯ ಹವಳಗಳನ್ನು ನಮ್ಮ ಬ್ಯಾಗ್ಗೆ ಹಾಕಿಕೊಳ್ಳುವುದರಲ್ಲಿ ಮಗ್ನರಾದೆವು. ಪಿಟ್ಟಿ ದ್ವೀಪಕ್ಕೆ ಕಾಲಿಡುತ್ತಿದ್ದಂತೆ, ಬರಿ ಗಾಲಿನಲ್ಲಿ ಕೋರಲ್ ಮೇಲೆ ಕಾಲಿಟ್ಟು ಇಲ್ಲವೇ ತುಂಬಾ ಹರಿತವಾದ ಕಲ್ಲುಗಳಿಗೆ ತಾಗಿಸಿಕೊಂಡು  ಒಬ್ಬೊಬರಾಗಿ ಗಾಯಾಳುಗಳ ಪಟ್ಟಿ ಸೇರತೊಡಗಿದರು. ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. 

ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. ನಾವೆಲ್ಲ ಆಯಾಸವಾಗುವರೆಗೂ ಈಜಿ ವಾಪಾಸ್ ದೋಣಿ ಹತ್ತಿ ಮತ್ತೆ ಕಲ್ಪೆನಿ ದ್ವೀಪಕ್ಕೆ ಬರುತ್ತಿದ್ದಂತೆ ಸ್ನಾನದ ಗೃಹಕ್ಕೆ ತೆರಳಿ ಬಟ್ಟೆ ಬದಲಾಯಿಸಿ ಊಟಕ್ಕೆ ಅಣಿಯಾದೆವು.  


ಲಕ್ಷ ದ್ವೀಪಗಳ ಮಹಾ ಯಾನ – ದೋಣಿ ಸಾಗಲಿ.. ಮುಂದೆ ಹೋಗಲಿ.. ದೂರ ದ್ವೀಪವ ಸೇರಲಿ – ೪

ದಿನವೆಲ್ಲಾ ದಣಿದಿದ್ದ ದೇಹಕ್ಕೆ ನಿದ್ದೆಯೇನು ಕ್ಷಣ ಮಾತ್ರದಲ್ಲೇ ಆವರಿಸಿತು, ಆದರೆ ದೇಹ ನಿದ್ರಾವಸ್ಥೆಯಲ್ಲಿದ್ದರೂ  ಮನಸ್ಸು ಮಾತ್ರ  ಜಾಗೃತವಾಗಿತ್ತು. ಜಾಗೃತ ಮನ ಎಚ್ಚರಗೊಂಡಾಗ ಕೆಲ ಕ್ಷಣದಲ್ಲೇ  ಅಗಾಧ ನೀಲ ಸಾಗರದ ಮಧ್ಯದಲ್ಲಿ ಹುಣ್ಣಿಮೆಯ ಚಂದಿರನ ಬೆಳಕಿನ ಅಡಿಯಲ್ಲಿ ಪುಟ್ಟ ತೊಟ್ಟಿಲಿನಲ್ಲಿ ಒಂದೆಡೆ ಒಡಲಿನ  ನಿನಾದ  ಮತ್ತೊಂದಡೆ  ಹಡಗಿನ  ಹೃದಯದಿಂದ  ಬರುತ್ತಿದ್ದ   ಸಪ್ಪಳದ ಕಛೇರಿಯಲ್ಲಿ ಹಾಸಿಗೆಯೂ  ೩೬೦ ಡಿಗ್ರಿ  ತಿರುಗುತ್ತಾ ಮಲಗಿದ ಅನುಭವವಾಗ ತೊಡಗಿತು.  

ನಿಜ ಹೇಳಬೇಕೆಂದರೆ ಇದೊಂದು ಅನನ್ಯ ಅನುಭವ, ಎಲ್ಲೋ ನನಗೊಬ್ಬನಿಗೇ ಈ ರೀತಿ ಕನಸು ಬಿದ್ದಿರ ಬಹುದೇ  ಇಲ್ಲವೇ  ಅನುಭವವಾಗಿರಬಹುದೇ  ಎಂದು ಬೆಳಗ್ಗೆ ಎದ್ದು ನಮ್ಮನೆಯವರ ಹತ್ತಿರ ಕೇಳಿದೆ ಅವರಿಗೂ  ಸಹ ಇದೆ ಅನುಭವವಾಗಿತ್ತು. ಈ ಅನುಭವ ನಾವು ಲಕ್ಷದ್ವೀಪ ಪ್ರವಾಸ ಮುಗಿಸಿ ಒಂದು ವಾರವಾದ ಮೇಲೆ ಅಂತ್ಯಗೊಂಡಿತ್ತು, ಲಕ್ಷದ್ವೀಪ ಪ್ರವಾಸ ಎಷ್ಟು ಪ್ರಭಾವ ಬೀರಿತೆಂದರೆ ತಪ್ಪಾಗಲಾರದು. ಊರಿಗೆ ಮರಳಿ ಹಾಸಿಗೆಯೇ ಮೇಲೆ ಮಲಗಿದರೆ ಸಾಕು  ಹಾಸಿಗೆಯೂ  ಸಹ ನೀರಿನಲ್ಲಿ ತಿರುಗುತ್ತಾ ಸಮುದ್ರದ ಕಛೇರಿಯಲ್ಲಿ ಮುಳುಗಿದ ಅನುಭವ  ಸುಮಾರು ಒಂದು ವಾರವಿತ್ತು ಇದು ವಿಚಿತ್ರವೆನಿಸದರೂ ಅಸಾಧಾರಾಣವಾದದು ವರ್ಣನೆಗೆ ನಿಲುಕದ್ದು.  

ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನುಸಾಗರದ ಮಧ್ಯದಲ್ಲಿ ನಿಂತು ಹಡಗಿನಲ್ಲಿ ನೋಡುವ  ವಾಂಛೆ ಬಹುದಿನದಾಗಿತ್ತು.  ಹಾಗಾಗಿ  ಹಿಂದಿನ ದಿನ ಸೂರ್ಯಾಸ್ತವನ್ನು ತುಂಬಿಕೊಂಡಿದ್ದ ಕಣ್ಣುಗಳು ನಾಳಿನ ಸೂರ್ಯೋದಯಕ್ಕೆ ಸಾಕ್ಷಿಯಾಗಲು ಕಾತರದಿಂದ  ಕ್ಷಣಗಣನೆಯಲ್ಲಿ ತೊಡಗಿದ್ದವು. ಬೆಳಗಿನ ಐದು ಗಂಟೆಗೆ ಅಲಾರಂ ಮೊದಲ  ಬಾರಿಗೆ ಸದ್ದು ಮಾಡುವುದಕ್ಕೆ ಮುಂಚೆ ಜಾಗೃತ ಮನಸ್ಸು ಹಾಸಿಗೆಯಿಂದ ಬಡಿದೆಬ್ಬಿಸಿತ್ತು. ನಿತ್ಯ ಕರ್ಮ ಮುಗಿಸಿ,  ಎಲ್ಲಡೆಯೂ  ಕತ್ತಲೆ  ಇರಬಹುದೆಂದು ಭಾವಿಸಿ ಹಡಗಿನ ಮೇಲಿನ ಡೆಕ್ಕ ಕಡೆಗೆ ಗಗನ ವೀಕ್ಷಣೆಗೆ ಹೊರಟೆ. ಅದಾಗಲೇ ಹಡಗಿನ ಅಡುಗೆಕೋಣೆಯ ಸಿಬ್ಬಂದಿ  ಬೆಳಗಿನ ಚಹಾ ತಯಾರಿಸಿ ನಮಗಾಗಿ ಕಾಯುತ್ತ ಇದ್ದರು. ಒಂದಿಷ್ಟು ಚಹಾ ಲೋಟಕ್ಕೆ ಸುರಿದುಕೊಂಡು ಸೀದಾ ಮೇಲಿನ ಡೆಕ್ ಹೊರಟೇ ಆದರೆ ಅಲ್ಲಿ ಹೇಳಿ ಕೊಳ್ಳುವಷ್ಟು ಕತ್ತಲು ಇರಲಿಲ್ಲ. ನೆತ್ತಿಯ ಮೇಲೆ ಅಗಸವೂ ಶುಭ್ರವಾಗಿತ್ತು ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಇಣುಕಿ ಮಿಣಕಿ ಮರೆಯಾಗುತ್ತಿದ್ದವು. ಹುಣ್ಣಿಮೆಯ ಚಂದಿರ ಇಳೆಯ ತಂಪಿಳಿಸಿ ಮರೆಯಾಗುವ ಉತ್ಸಾಹದಲ್ಲಿದ್ದ, ಸಾಗರದ ಮೇಲಿನ ತಣ್ಣನೆ ಗಾಳಿ ಮಂದವಾಗಿ ಬೀಸುತಿತ್ತು, ಸುತ್ತಲೂ ಅಗಾಧ  ಜಲರಾಶಿ, ಬಹು ದೊರದಲ್ಲಿ ನಮ್ಮ ರೀತಿಯ ಹಡಗು ಇಲ್ಲವೇ ಸಿನಿಮಾದಲ್ಲಿ ತೋರಿಸುವ ದಾರಿ ತಪ್ಪಿದ ದೋಣಿಯಾದರು , ಹಾರುವ ಡಾಲ್ಫಿನ್ , ಶಾರ್ಕ್ , ತಿಮಿಂಗಿಲ, ಮೆಗಾಲಾಡನ್ ಎಲ್ಲಾದರೂ ಕಾಣಿಸಿತೇ ಎಂದು ಕಣ್ಣು ಹಾಯಿಸಿದೆ ಅದಾವುದಾರೂ ಸುಳಿವು ಸಹ ಇಲ್ಲ. 

ಮೂಡಣದಲ್ಲಿ ಹಿಂದಿನ ದಿನ  ಶರಧಿಯಲ್ಲಿ ಮುಳುಗಿದ್ದ ಸೂರ್ಯ ಅಂಬರ ಚುಂಬಿಸಲು ಮೇಲೇರುತ್ತಿದ್ದ ಆದರೆ ಈ ದೃಶ್ಯಕ್ಕೆ ಸೆನ್ಸಾರ್  ಕಟ್ ಮಾಡಲು ಮೇಘ ರಾಜನು  ಕಣ್ಣಿಗೆ ಕಾಣುವಂತೆ ಅಡ್ಡಗಾಲು ಹಾಕಿದ್ದನು. ಸುಮಾರು ಸಮಯ ಕಳೆಯಿತು ಸೂರ್ಯನ ಸುಳಿವೇ ಇಲ್ಲ. ಎಲ್ಲೋ ನನಗೆ ಸಾಕ್ರಟೀಸನ  ಋಣದ ಹುಂಜದ  ಪದ್ಯವು ಸಹ ಹೊಳೆಯಿತು  ಆದರೆ ಸಾಕ್ರಟೀಸನಾಗಲಿ ಇಲ್ಲವೇ ಹುಂಜವೇ ಆಗಲಿ ಇರಲಿಲ್ಲ, ಮೂಡಣವು  ಸಂಪೂರ್ಣ ಬಂಗಾರಮಾಯವಾಗಿತ್ತು , ನೆತ್ತಿಯ ಮೇಲೆ ಶುಭ್ರವಾದ ನೀಲಿ ಬಣ್ಣದ ಅಗಸವು ಗೋಚರಿಸುತ್ತಿತ್ತು. ಅದಾಗಲೇ ರವಿಯು ಸಾಗರದಿಂದ ಮೇಲೆದ್ದಾಗಿತ್ತು ಮೋಡಗಳು ಮರೆಯಾಗಲು ಆರಂಭಿಸಿದ್ದವು ಬಹುದಿನದ ಅತಿ ಮುಖ್ಯ ದೃಶ್ಯವನ್ನು ಸವಿಯುವ ಭಾಗ್ಯ ಸ್ವಲ್ಪದರಲ್ಲೇ ತಪ್ಪಿತು.  ಸುಮಾರು  ನೆಲ ಬಿಟ್ಟು ೩೫೦ ಕಿಲೋಮೀಟರ್ ಬಂದರು ಸುತ್ತಲೂ ಯಾವದೇ  ಯಾವುದೇ ದ್ವೀಪದ ಕುರುಹುಗಳ ಸುಳಿವಿರಲಿಲ್ಲ ಕಡೆಗೆ  ಭಾರವಾದ ಮನಸ್ಸಿನಿಂದ ನಿಧಾನವಾಗಿ ಕೋಣೆಗೆ ಹಿಂತಿರುಗಿದೆ. 

ಬೆಳಗಿನ ತಿಂಡಿ ಮುಗಿಸಿ ಹಡಗಿನ ಮೊದಲ ಡಿಸ್ ಎಂಬಾರ್ಕಷನ್  ಕರೆಗೆ ಕಾಯುತ್ತಿದ್ದೆ (ಹಡಗಿನಿಂದ ಇಳಿಯುವಿಕೆ),  ಹಡಗು ಸುಮಾರು ಎರಡು ಗಂಟೆ ತಡವಾಗಿ ಮಿನಿಕಾಯ್  ದ್ವೀಪ ತಲುಪಿತ್ತು.  ದ್ವೀಪದ ಹತ್ತಿರ ಎಂದರೆ ಸುಮಾರು ಮೂರರಿಂದ ನಾಲ್ಕು ಕಿಲೋ ಮೀಟರ್ ದೊರದ ಆಳದ ಸಮುದ್ರದಲ್ಲಿ ಲಂಗುರು ಹಾಕಲಾಯಿತು. ಹಡಗಿನಿಂದ ಇಳಿಯುವುದನ್ನು ಮೊದಲ ಡೆಕ್ಕಿನ ಬಾಗಿಲಿನಲ್ಲಿ ವ್ಯವಸ್ಥೆ ಮಾಡಿರುತ್ತಾರೆ  ಅಲ್ಲಿಂದ ಸುಮಾರು ೨೫ ರಿಂದ  ೪೦ ಜನ ಕೂರಬಹುದಾದ ಸಣ್ಣ ಸಣ್ಣ ದೋಣಿಯಲ್ಲಿ ಮೊದಲಿಗೆ ದ್ವೀಪದ ನಿವಾಸಿಗಳು  ನಂತರ ಪ್ರವಾಸಿಗರನ್ನು ತಂಡ ತಂಡವಾಗಿ ದ್ವೀಪಕ್ಕೆ ವರ್ಗಾಯಿಸುತ್ತಾರೆ. ಹಡಗಿನಿಂದ ಸಣ್ಣ ದೋಣಿಯಲ್ಲಿ ಮಿನಿಕಾಯ್ ದ್ವೀಪ ತಲುಪಲು ಸುಮಾರು ೨೦ ರಿಂದ ೩೦ ನಿಮಿಷದ ಪ್ರಯಾಣ.

ಹಡಗು ಲಂಗುರು ಹಾಕಿದಂತೆ, ದ್ವೀಪದ ದೋಣಿಗಳು ಒಂದೊಂದಾಗಿ  ಡಿಸ್ ಎಂಬಾರ್ಕಷನ್ ಬಾಗಿಲಿನ ಹತ್ತಿರ ನಿಂತು ದೋಣಿ ತುಂಬಿದ ತಕ್ಷಣ ಹೊರಡ ತೊಡಗಿದವು. ಪ್ರವಾಸಿಗರು ದೋಣಿ ಏರುವುದಕ್ಕೋ ಸ್ಥಳೀಯರು ದೋಣಿ ಏರುವುದಕ್ಕೋ ಬಹಳ ವ್ಯತ್ಯಾಸವಿದೆ. ಪ್ರವಾಸಿಗರಿಗೆ ಲೈಫ್ ಜಾಕೇಟ್ ಕೊಟ್ಟರೇ ಸ್ಥಳೀಯರಿಗೆ ದೇಹವೇ ಲೈಫ್ ಜಾಕೇಟ್ ಹಾಗೂ ಸ್ಥಳೀಯರು ದಿನ ಬಳಕೆಯ ವಸ್ತುಗಳ ಜೊತೆ ದೋಣಿ ಏರಬೇಕು, ಪ್ರವಾಸಿಗರ ದೋಣಿಯಲ್ಲಿ ಕೇವಲ ಪ್ರವಾಸಿಗರಿಗಷ್ಟೇ ಸೀಮಿತ ಎಲ್ಲೋ ಇದು ತಾರತಮ್ಯ ಎಂದು ಅನಿಸಿದರೂ ಮೀನಿಗೆ ಸಮುದ್ರವಾದರೂ ಸರಿಯೇ ಸಣ್ಣ ಬಾವಿಯಾದರೂ ಸರಿ ಎಂಬ ಭಾವನೆ ಮಾಡುತ್ತದೆ.  ನಮ್ಮನ್ನು ಎಲ್ಲಿ ಹಡಗಿನಲ್ಲಿಯೇ ಬಿಟ್ಟಾರೋ ಎಂದು ಪ್ರವಾಸಿಗರು ನಾ ಮುಂದು ತಾ ಮುಂದು ದೋಣಿ ಏರಲು ಆರಂಭಿಸಿದರು. ಕಡೆಗೆ ನಾವೂ ಸಹ ಏರಿಯಾಯಿತು.  

ದೋಣಿಯು ದ್ವೀಪದ ಕಡೆಗೆ ಸಾಗಿದಂತೆ  ತಸು ದೂರದಲ್ಲಿ ಸಾಗರದ ಬಣ್ಣವು ಕಡು ನೀಲಿಯಿದ್ದದ್ದು ಮೆಲ್ಲನೇ ತಿಳಿ ನೀಲಿಗೆ ಬದಲಾಯಿತು, ಮತ್ತೆ ಮುಂದೆ ಗಾಢ ಪಚ್ಚೆ ಬಣ್ಣಕ್ಕೆ ತಿರುಗಿ, ಸ್ವಲ್ಪ ಸಮಯದಲ್ಲೇ  ತಿಳಿ ಹಸಿರು ವರ್ಣಮಯವಾಯಿತು, ದ್ವೀಪ ಸಮೀಪಿಸಿದಂತೆ  ಮತ್ತೆ ತಿಳಿ ನೀಲಿಗೆ ತಿರುಗಿ ಸ್ಪಟಿಕದಷ್ಟು ಶುಭ್ರವಾಗಿ ಸಾಗರದ ತಳ ಕಾಣಲ್ಪಟ್ಟಿತು. ಈ ವರ್ಣಮಯದ ರಂಜನೀಯ ೩೦ ನಿಮಿಷ ಪಯಣ ಮನಸಿಗೆ ಮುದ ನೀಡಿತು ಎಂದರೇ ತಪ್ಪಾಗಲಾರದು.  

ಅದೇ ಸಮಯಕ್ಕೆ ನೆನಪಾಗಿದ್ದು ಸರ್ ಸಿ ವಿ ರಾಮನ್ ಅವರು ಇಂಗ್ಲೆಂಡ್ ನಿಂದ ಭಾರತಕ್ಕೆ ಮೆಡಿಟರೇನಿಯನ್ ಸಮುದ್ರದ ಮೇಲೆ ಸಮುದ್ರಯಾನ  ಮಾಡುವಾಗ  ಬೆಳಕಿನ  ಸಂಶೋಧನೆಗೆ ಬಳಸುವ ಉಪಕರಣಗಳಿಂದ  ಕ್ಷಣ ಕ್ಷಣಕ್ಕೂ ಸಮುದ್ರದ ರಂಜನೀಯ  ಬದುಕಿನ ಮೇಲೆ  ಪ್ರಯೋಗ ಮಾಡಿ ಭಾರತಕ್ಕೆ ಕಾಲಿಡುವುದರಲ್ಲೇ ಮೊದಲು ಸಂಶೋಧನಾ ಪ್ರಬಂಧವನ್ನು ಬೆಳಕಿನ ಚದುರುವಿಕೆಯ ಮೇಲೆ ಬರೆದು ನೇಚರ್ ಪತ್ರಿಕೆ ಕಳುಹಿಸಿ ಕೊಟ್ಟದ್ದು ಎಂಬ ಬಾಲ್ಯದ ಪಠ್ಯದಲ್ಲಿದ್ದ ಪಾಠ. 

ಅದಾಗಲೇ  ರವಿಯು ಎಂದಿನಂತೆ ಪ್ರಖರವಾಗಿ ಬೆಳಗುತ್ತಿದ್ದರೂ ಪ್ರಕೃತಿಯ ವಿಸ್ಮಯವನ್ನು ಆಸ್ವಾದಿಸುತ್ತಲೇ ತೀರ ತಲುಪಿದ್ದು ಒಂದು ರೀತಿ ಸಮಾಧಾನವನ್ನು ತಂದಿತ್ತು , ಹಡಗು ಹತ್ತಿ ಸುಮಾರು ೩೦ ಗಂಟೆಗಳ ನಂತರ ನಾವು ಧರೆಯ ಸ್ಪರ್ಶ ಮಾಡಿದ್ದೆವು ಎಲ್ಲೂ ನಿಲ್ ಆರ್ಮ್ ಸ್ಟ್ರಾಂಗ್ ಚಂದಿರನ ಮೇಲೆ ಕಾಲಿಟ್ಟಾಗ , ಕೊಲಂಬಸ್ ಅಮೇರಿಕಾ ಖಂಡವನ್ನು ಅನ್ವೇಷಣೆ ಮಾಡಿದಷ್ಟೇ, ವಾಸ್ಕೊ ಡಾ ಗಾಮಾ ಭರತ ಖಂಡಕ್ಕೆ ಹೊಸ ಸಮುದ್ರ ಮಾರ್ಗ ಕಂಡು ಹಿಡಿದಷ್ಟೇ, ಆರ್ಕಿಮಿಡಿಸ್ ಬೆತ್ತಲೆಯಾಗಿ ಯುರೇಕಾ ಎಂದು ಬಾತ್ ಟಬ್ನಿಂದ ಎದ್ದಾಗ ಅದ ಖುಷಿ ನನಗಾಗಿತ್ತು.   

ಮುಂದಿನ ವಾರ : ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ..


ಲಕ್ಷ ದ್ವೀಪಗಳ ಮಹಾ ಯಾನ – ಸಾಗರದಲ್ಲಿನ ನಾಲ್ಕು ಗೋಡೆಗಳ ಮಧ್ಯೆ – ೩

ನಾವು ಯಾವುದೇ ಎರಡು ಚಕ್ರಕ್ಕಿಂತ ಹೆಚ್ಚು ಗಾಲಿಗಳು ಇರುವ  ವಾಹನವನ್ನು ಹತ್ತುವಾಗ ಕಿಟಕಿ ಪಕ್ಕ ಕೂರುವುದು ಸಹಜ, ಅದರಲ್ಲೂ ಬಸ್, ರೈಲು , ವಿಮಾನದಲ್ಲಿಯೂ ಸಹ ಹಾಗೆ ಮಾಡುತ್ತೇವೆ. ವಿಮಾನ ಹತ್ತಲು ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ ಹಲವರು ವಿಮಾನದ ಸಿಬ್ಬಂದಿ ಹತ್ತಿರ ‘ ದಯವಿಟ್ಟು , ಕಿಟಕಿ ಕಡೆ ಇರುವ  ಆಸನ ಕೊಡಿ’ ಎಂದು ಬೇಡುವುದನ್ನು ನೋಡಿರುತ್ತೇವೆ ಇಲ್ಲವೇ ನಾವೇ ಬೇಡಿರುತ್ತವೆ. 

ಹಾಗೆಯೇ  ಹಡಗೇರುವ  ಸಮಯದಲ್ಲಿ ನಮ್ಮ ಕ್ಯಾಬಿನ್ಗೆ ಕಿಟಕಿ ಇದ್ದರೆ  ಚೆನ್ನ , ಹಾಗಾಗಿ ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ  ಸಾಗರದ ವಿಹಂಗಮ ದೃಶ್ಯ ಕಾಣುವ ಕಿಟಕಿ ಇದ್ದರೆ ಎಷ್ಟು ಚೆನ್ನ ಎಂದು ಆಲೋಚಿಸಿ, ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ದಯವಿಟ್ಟು ನಮಗೂ ಸಹ ಒಂದು ಕ್ಯಾಬಿನ್ ಕೊಡಿ ಎಂದು ಕೇಳಬೇಕೆಂದು ಇದ್ದೆ,  ಆದರೆ ಅದೇ ಗಡಿಬಿಡಿಯಲ್ಲಿ ಮರೆತು ಬೋರ್ಡಿಂಗ್ ಪಾಸ್ ಪಡೆದಿದ್ದೆ. ಮತ್ತೆ ಅದು ನೆನಪಿಗೆ ಬಂದದ್ದು  ಹಡಗನ್ನು ಏರಿದಾಗ, ಹಾಗಾಗಿ ನಮ್ಮ ಪಾಸ್ನಲ್ಲಿದ್ದ ಕ್ಯಾಬಿನ್ ಅನ್ನು ಹುಡುಕುತ್ತ ಮೊದಲು  ನಮ್ಮ ಕ್ಯಾಬಿನ್  ಹಾಗು ವಿಂಡೋ ಹೇಗಿದೆ ಎಂಬುದಕ್ಕೆ ತೆರೆ ಬಿದ್ದದ್ದು ನಮ್ಮ ಕ್ಯಾಬಿನ್ ಪ್ರವೇಶಿಸಿದಾಗಲೇ. 

ಕ್ಯಾಬಿನ್ ಒಳಗೆ ಹೋಗುತ್ತಿದ್ದಂತೆ  ಕಂಡದ್ದು ,  ಕೋಣೆಯು ಸುಮಾರು ೧೦ * ೧೮ ಅಡಿ ಇರಬಹುದು,  ಒಂದು ಮೂಲೆಗೆ ಪುಟ್ಟದಾದ  ಶೌಚಾಲಯ , ಒಂದು ಪುಟ್ಟ ಕಿಟಕಿ,  ಒಬ್ಬರು ಮೇಲಿನ ಬರ್ತ ನಲ್ಲಿ ಮತ್ತೊಬ್ಬರು ಕೆಳಗಿನ ಬರ್ತ ನಲ್ಲಿ ಒಂದು ರೀತಿ  ಮಕ್ಕಳು ಮಲಗುವ ಹಾಸಿಗೆ ರೀತಿಯ ಹಾಸಿಗೆ, ಪುಟ್ಟದಾದ  ಮೇಜು, ಎರಡು ಕುರ್ಚಿ,  ಮೇಜಿನ ಮೇಲೆ ಎರಡು ಬಾಟಲ್ ನೀರು, ಸೇಬು ಮತ್ತು ಕಿತ್ತಳೆ ಹಣ್ಣು ಅದಾಗಲೇ ಆಸೀನವಾಗಿತ್ತು.  ನಮ್ಮ ಪರಿಕರಗಳನ್ನು ಸುರಕ್ಷಿತವಾಗಿ ಇಡಲು ಒಂದು ಕಪಾಟು ,  ಒಂದು ಫ್ಯಾನ್ ,  ನಾಲ್ಕು ಲೈಫ್  ಜಾಕೇಟ್ , ಎರಡನ್ನು ದಿನ ಬಳಕೆಗೆ , ಮತ್ತೆರಡನ್ನು  ಅಪಾಯದ ಸಂದರ್ಭದಲ್ಲಿ ಅಂದರೆ ಹಡಗಿಗೆ ಅಪಾಯವಾದಾಗ  ಬಳಸಲು ಎಂಬರ್ಥ.  ಒಂದು ಸ್ಪೀಕರ್ ( ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೂಚನೆ ಕೊಟ್ಟಂತೆ  ಇನ್ಫಾರ್ಮಶನ್ ರೂಮ್ ನಿಂದ  ಆಗಾಗ ನಮಗೆ ಅಗತ್ಯದ ಸಂದೇಶ ಕೊಡಲು).  ಎಲ್ಲವೂ ಅಚ್ಚುಕಟ್ಟಾಗಿತ್ತು.  ಹಾಗಾಗಿ  ಎ ಸಿ ಸರಿಯಿದೆಯೇ, ನೀರು ಬರುತ್ತಿದೆಯೇ,  ಬಿಸಿ ನೀರು ಬರುತ್ತದೆಯೇ,  ದೀಪ , ಫ್ಯಾನ್ ಉರಿಯುತ್ತಿದೆಯೇ ಎಂದು  ಪರೀಕ್ಷಿಸಿ ಮುಂದೆ ಕ್ಯಾಬಿನ್  ಬೀಗ  ಎಲ್ಲಿ ಸಿಗುತ್ತಿಲ್ಲ ಎಂಬ ಆತಂಕ ಎದುರಾಯಿತು. 

ಅಕ್ಕ ಪಕ್ಕದ ಕ್ಯಾಬಿನ್ ಸಹ ಪ್ರವಾಸಿಗರನ್ನು ಕೇಳಿದಾಗ ನಮಗೆ ಬೀಗ ಸಿಕ್ಕಿದೆ ಎನ್ನುವ ಉತ್ತರ ಬರಬೇಕೆ, ಬೀಗವಿಲ್ಲದೆ ಪರಿಕರಗಳು ಇಲ್ಲಿ  ಅಸುರಕ್ಷಿತ ಎಂಬ ಭಯದಿಂದ  ಟೂರ್ ಮ್ಯಾನೇಜರ್ ಹುಡುಕಿ ಕೊಂಡು ಕೇಳಿದ್ದಾಯಿತು. ಬೀಗಗಳು ಇವೆ ಆದರೆ ಅವು ಯಾವು  ಕೆಲಸ ಮಾಡುವುದಿಲ್ಲ ಅದು ನಿಮ್ಮ ಸಹ ಪ್ರಯಾಣಿಕರಿಗೆ ಗೊತ್ತಿಲ್ಲ, ನಿಮ್ಮ ವಸ್ತುಗಳನ್ನು ಬೀರುವಿನ ಒಳಗೆ ಇಟ್ಟು ಚೀಲಕಕ್ಕೆ ಬೀಗ ಹಾಕಿ, ಬೀಗವು ಇಲ್ಲದಿದ್ದರೆ ಕೆಳಗೆ ಸ್ಟೋರ್ ಅಲ್ಲಿ ಸಿಗುತ್ತದೆ . ಇಲ್ಲಿ ಎಲ್ಲವೂ ಸೇಫ್ , ಯೋಚನೆ ಮಾಡಬೇಡಿ ಎಂದು ಹೇಳಿ ಕಳುಸಿದ. ನಾವು ಹೇಗಿದ್ದರೂ ನಾಲ್ಕು ಬೀಗ ತಂದಿದ್ದೆವು ಹಾಗಾಗಿ ಜಾಸ್ತಿ ಯೋಚನೆ ಮಾಡದೇ ಕ್ಯಾಬಿನ್ ಕಡೆ ಮುಖ ಮಾಡಿದೆ. ಕ್ಯಾಬಿನ್ ಕಡೆ ಬರುತ್ತಿದ್ದಂತೆ ನಮ್ಮ ಸಹ ಪ್ರಯಾಣಿಕರು ಬೀಗ ಕೆಲಸ ಮಾಡುತ್ತಿಲ್ಲ ಎಂಬ ಅಸಹಾಯಕತೆ ಪ್ರದರ್ಶಿಸಿದರು. ನಾನು ಟೂರ್ ಮ್ಯಾನೇಜರ್ ಹೇಳಿದ ಉತ್ತರವನ್ನೇ ಅವರಿಗೂ ನೀಡಿದೆ, ನಾನೂ ಒಮ್ಮೆ ಕೇಳಿ ಬರುತ್ತೇನೆ ಎಂದು ಆತ ಅವನನ್ನು ಹುಡುಕಿಕೊಂಡು ಹೋದ. 

ಸ್ವಲ್ಪ ಸಮಯದಲ್ಲಿ ಊಟ ತಯಾರಾಗಿದೆ, ಮೊದಲಿಗೆ ಮೂರು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು ಬನ್ನಿ ಎಂದು  ಕೋಣೆಯ ಸ್ಪೀಕರ್ ನಲ್ಲಿ ಘೋಷಣೆ ಮೊಳಗಿತು. ನಾಲ್ಕನೇ ಡೆಕ್ಕಿನಲ್ಲಿ ಹೆಚ್ಚು ಕೋಣೆಗಳು ಇವೆ ನಮ್ಮದು ನಾಲ್ಕನೆಯ ಡೆಕ್ ಆಗಿದ್ದರಿಂದ ನಮ್ಮ ಸರದಿಗಾಗಿ ಕಾದೆವು, ಸಲ್ಪ ಸಮಯದಲ್ಲಿ ನಾಲ್ಕನೇ ಡೆಕ್ಕಿನ ಪ್ರವಾಸಿಗರು ಊಟದ ಕೋಣೆಗೆ ಬನ್ನಿ ಎಂಬ ಕರೆಗೆ ಓಗುಟ್ಟು, ನಾವು  ಧಾವಿಸಿದಾಗ ತಿಳಿದಿದ್ದು ಮೊದಲ ಕರೆ ಬಂದಾಗಲೇ  ಒಟ್ಟಿಗೆ  ಮೂರು, ನಾಲ್ಕು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು  ಊಟದ ಕೋಣೆಗೆ ಒಟ್ಟಿಗೆ ಧಾಳಿ ಇಟ್ಟಿದ್ದರು  ಎಂಬ ಸಂಗತಿ. ಒಂದು ಕಡೆಗೆ ಸಸ್ಯ ಹಾರದ  ಊಟದ ಕೋಣೆ ಮತ್ತೊಂದು ಕಡೆಗೆ ಮಾಂಸಾಹಾರದ  ಊಟದ ಕೋಣೆಯೆಂದು ಫಲಕವಿತ್ತು, ಸಾಲಾಗಿ ಸರತಿಯಲ್ಲಿ ನಿಂತು ಬಡಿಸಿಕೊಂಡು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಣೆ ಮಾಡಿದ್ದಾಯಿತು.    

ಹಡಗು ಇನ್ನು ಬಂದರಿನಿಂದ ಹೊರಟಿರಲಿಲ್ಲ, ಹಾಗಾಗಿ ಹಡಗಿನ ಓಪನ್ ಡೆಕ್ ಕಡೆಗೆ ಒಮ್ಮೆ ಹೋಗಿಬರೋಣ ಎಂದು ಹೋದರೆ  ಸೂರ್ಯ ಉಗ್ರ ನರಸಿಂಹನ ಅವತಾರದಲ್ಲಿ ಬೆಳಗುತ್ತಿದ್ದ ಅದೇ ಸಮಯಕ್ಕೆ  ವಾಯು ನಮ್ಮನ್ನು ತಣ್ಣನೆ ಗಾಳಿಯಿಂದ ಸಂತಯಿಸುತ್ತಿದ್ದ. ಇದಾದ ಸ್ವಲ್ಪ ಸಮಯದಲ್ಲೇ ಹಡಗು ನಿಧಾನವಾಗಿ  ಸಾಗರವನ್ನು ಸೀಳಿ ದಾರಿ ಮಾಡಿಕೊಂಡು ಬಂದರನ್ನು ಬಿಟ್ಟು ಪಶ್ಚಿಮದಡೆ ಪ್ರಯಾಣವನ್ನು ಆರಂಭಿಸಿತ್ತು.  ಹಡಗಿನ ಓಪನ್ ಡೆಕ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಇದ್ದಾಗ ಪ್ರವಾಸಿಗರೆಲ್ಲ ಮನೋರಂಜನ ಕೋಣೆಗೆ ಬರಬೇಕು ಎಂದು ಅಲ್ಲಿ  ಟೂರ್ ಮ್ಯಾನೇಜರ್ ನಿಮಗಾಗಿ ಕಾಯುತ್ತಿದ್ದರೆಂದು ಹಾಗಾಗಿ ಬರಬೇಕೆಂದು ಅಪ್ಪಣೆಯಾಯಿತು. 

ಸುಮಾರು ೮೦ ರಿಂದ ೧೦೦ ಜನ ಒಟ್ಟಿಗೆ ಕೋರಬಹುದಾದ ಒಂದು ಚಿಕ್ಕ ಸಿನಿಮಾ ಮಂದಿರದ ತರಹದ ಕೋಣೆ ಅದು, ಯಾಸಿರ್  ನಗು ಮುಖದಿಂದ ಸ್ವಾಗತಿಸಿ, ಕೋಣೆ ತುಂಬುತ್ತಿದ್ದಂತೆ ಮುಂದಿನ ಪ್ರವಾಸದ ವೇಳಾಪಟ್ಟಿಯನ್ನು ಮುಂದಿಟ್ಟು ಹಾಗೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ಒಂದೊಂದು ದ್ವೀಪದ ಬಗ್ಗೆ ಮಾಹಿತಿ ನೀಡುತ್ತಿದ್ದನು..  

ಹಡಗು ಮುಳುಗಿದರೇ ಏನು ಕತೆ, ನನಗೆ ಎಪ್ಪತ್ತು ವರ್ಷ ಸ್ಕೂಬಾ  ಡೈವ್ ಮಾಡಬಹುದಾ,  ಧೂಮಪಾನ ಮತ್ತು ಸುರಪಾನ ಮಾಡಬಹುದಾ, ಹುಷಾರ್ ತಪ್ಪಿದರೇ ಏನು ಕತೆ, ನಾವು ಯಾವ ಲೈಫ್ ಜಾಕೆಟ್ ಬಳಸಬೇಕು, ರೂಮ್ಗಳಿಗೆ ಬೀಗಗಳು ಇಲ್ಲ ಕಳ್ಳತನವಾದರೇ ಯಾರು ಜವಾಬ್ದಾರಿ, ಸೀ ಸಿಕ್ನೆಸ್ ಬಂದರೆ, ಮೇಲೆ ಸ್ವಿಮಿಂಗ್ ಪೂಲ್ ಅಲ್ಲಿ ನೀರು ಯಾಕಿಲ್ಲ, ನೀರು ಖಾಲಿಯಾದರೆ ಎಲ್ಲಿ ಸಿಗುತ್ತೆ , ಮೆಡಿಸಿನ್ ಎಲ್ಲಿ ಸಿಗುತ್ತೆ ,  ಜಿಮ್ ಇದೆಯಾ?,  ಟೀವಿಲಿ ಐಪಿಎಲ್ ಬರುತ್ತಾ ಎಂದು ಕ್ರಿಕೆಟ್ ಅಭಿಮಾನಿಗಳು, ಅತ್ತ ಭಾಗ್ಯ ಲಕ್ಷ್ಮಿ ಬರುತ್ತಾ ಅಂತ ನಮ್ಮ ಮನೆಯವರು, ಹೀಗೆ  ಪ್ರಶ್ನೆಗಳು ಅವನತ್ತ ತೇಲಿ ಬರುತ್ತಿದ್ದವು ಇವಕ್ಕೆಲ್ಲ ಅನುಭವಿ ಯಾಸಿರ್ ಲೀಲಾಜಾಲವಾಗಿ ಉತ್ತರಿಸುತ್ತಾ ಪ್ರಯಾಣಿಕರ ಸಮಾವೇಶವನ್ನು  ಉದ್ದೇಶಿ ಅನುಭವವವನ್ನು ಹಂಚಿಕೊಳ್ಳುತ್ತಿದ್ದನು. ಏನಾದರು ತೊಂದರೆ ಇದ್ದರೆ ನನ್ನನ್ನು ಸಂಪರ್ಕಿಸಲು ತಿಳಿಸಿ , ಪ್ರಯಾಣ ಸುಖಮಯವಾಗಲಿ ಎಂದು ಹಾರೈಸಿ ತನ್ನ ಸಂಭಾಷಣೆಯನ್ನು ಮುಗಿಸಿದನು. 

ಯಾಸೀರನ ಸಮಾವೇಶದಲ್ಲಿದ್ದರೂ ಮನಸ್ಸು ಮಾತ್ರ ಬೀಗವಿಲ್ಲದ  ನಮ್ಮ ಕೋಣೆಯ ಕಡೆಯಿತ್ತು, ಹಾಗಾಗಿ  ಮನೋರಂಜನ ಕೋಣೆಯಿಂದ ನೇರವಾಗಿ ನಾವು ನಮ್ಮ ಕೋಣೆಗೆ ಬಂದು ಎಂದಿನಂತೆ ನಮ್ಮ ಪರಿಕರಗಳು ಸುರಕ್ಷಿತವಾಗಿವೆ ಎಂದು ಖಾತ್ರಿ ಮಾಡಿಕೊಂಡೆವು. ಆಗಲೇ ಉಪಹಾರದ  ಕೋಣೆಯಲ್ಲಿ  ಸಂಜೆಯ ಕಾಫಿ ಮತ್ತು ಚಹಾ ತಯಾರಿದೆ ಎಂಬ ಸಂದೇಶ ಬಂತು. ಒಂದು ಕಪ್ಪು ಟೀ ಹಿಡಿದು ಸೀದಾ ಹಡಗಿನ ಮೇಲಿನ ಡೆಕ್ಕ ಕಡೆಗೆ ಸೂರ್ಯಾಸ್ತ ನೋಡಲು ಹೊರಟೆವು.  ದಿನವೆಲ್ಲ ಉಗ್ರವಾಗಿ ಬೆಳಗಿದ್ದ ರವಿಯು ತಸು ದಣಿದಂತೆ ಕಂಡರೂ ಶಾಂತನಾಗಿ ಸಾಗರದ ಅಂಚಿನಲ್ಲಿ ಮರೆಯಾಗ ತೊಡಗಿದ್ದ, ಹಡಗು ರವಿಯನ್ನು ಸಂತಯಿಸಲು ಸಾಗರವನ್ನು ಸೀಳಿ ಮುನ್ನುಗುತ್ತಿತ್ತು, ಬಾನಲ್ಲಿ ಹುಣ್ಣಿಮೆಯ ಚಂದ್ರ ಅದಾಗಲೇ ಮೂಡಿದ್ದ ಜೊತೆಗೆ ಒಂದಿಷ್ಟು ಬೆಳ್ಳಿ ಚುಕ್ಕೆಗಳನ್ನು ಕರೆ ತಂದಿದ್ದ, ದಿನವೆಲ್ಲ ಶಾಂತವಾಗಿದ್ದ ಸಾಗರವು ಪೂರ್ಣ ಶಶಾಂಕನ  ಕಂಡೊಡನೇ  ಸಂತೋಷ ತಡೆಯಲಾಗದೇ ಉಬ್ಬರಿಸಿ ಅಬ್ಬರಿಸ ತೊಡಗಿದ, ವಾಯುವು ಸಹ ತನ್ನ ಶಕ್ತಿಯನ್ನು ಕ್ಷಣಕ್ಷಣಕ್ಕೂ ವೃದ್ಧಿಸಿಕೊಳ್ಳುತ್ತಿದ್ದ ಹಾಗಾಗಿ ಬೀಸುವ ಗಾಳಿಗೆ ಎಲ್ಲಿ ನಾವು ಸಮುದ್ರ ಪಾಲಾದೆವೋ ಎಂದು ನಿಧಾವಾಗಿ ಕ್ಯಾಬಿನ್ ಕಡೆಗೆ ವಿಶ್ರಮಿಸಲು ಹೊರಟೆವು. 

ಅದಾಗಲೇ  ಸುಮಾರು ಹೊತ್ತಾಗಿತ್ತು ‘ಊಟ ತಯಾರಿದೆ’ ಎಂಬ ಸಂದೇಶವು ಸ್ಪೀಕರ್ ಮೂಲಕ ಬಂತು, ಊಟ ಮುಗಿಸಿ , ಮತ್ತೊಂದು  ಬಾರಿ ಹಡಗಿನ ಓಪನ್ ಡೆಕ್ ಅಲ್ಲಿ ವಾಯು ವಿಹಾರ ಮಾಡಿ, ವಾಪಾಸ್ ಕೋಣೆಗೆ ಹಿಂತಿರುಗಿದೇವು. ನಾಳೆ  ಭೇಟಿ ನೀಡಲಿರುವ  ದ್ವೀಪಕ್ಕೆ ಅಗತ್ಯವಿರುವ  ವಸ್ತುಗಳನ್ನು ಒಂದು ಚೀಲಕ್ಕೆ ಹಾಕಿ, ರೂಮಿನ ಚೀಲಕ ಜಡಿದು ಹಾಸಿಗೆ ಮೇಲೆ ಮಲಗುತ್ತಿದ್ದಂತೆ, ನಾಳೆಯ ಮಿನಿ ಕಾಯ್ ದ್ವೀಪದ ಚಿತ್ರಗಳು ಒಂದೆಡೆ , ಇತ್ತ ಕಡೆ ಬೀಗವಿಲ್ಲದೇ ಪರಿಕರಗಳು ಸುರಕ್ಷಿತವೇ ಎಂಬ ವಾದಗಳು ಮನದಲ್ಲಿ ಮೂಡುತ್ತಿದ್ದಂತೆ ನಿದ್ರಾದೇವಿಯ ಪರವಶವಾದೆವು….

ಮುಂದಿನ ವಾರ : ದೋಣಿ ಸಾಗಲಿ ಮುಂದೆ ಹೋಗಲಿ ದೂರ  ದ್ವೀಪವ ಸೇರಲಿ…