Category Archives: ರಾಷ್ಟ್ರಕೂಟ

ನಮ್ಮ ನಾಡು , ನಮ್ಮ ಹೆಮ್ಮೆ – ವೀರ ಕಲಿಗಳು – ೨

ನ್ಯಾಯಾಂಗ ನಮ್ಮ ಪ್ರಜಾತಂತ್ರದ ಒಂದು ಬಲಿಷ್ಠ ಅಂಗ. ಕಾರ್ಯಾಂಗ ಮತ್ತು ಶಾಸಕಾಂಗಗಳು ನ್ಯಾಯಾಂಗದ ಮುಂದೆ ತಲೆ ಬಾಗುತ್ತವೆ. ನ್ಯಾಯಾಂಗದ ನಿರ್ಣಯ ದಿಕ್ಕರಿಸುವುದು ಮತ್ತು ಪಾಲನೆ ಮಾಡದೇ ಇರುವುದು ಅತ್ಯಂತ ದೊಡ್ಡ ಅಪರಾಧ. ಇತ್ತೀಚಿನ ಬೆಳವಣಿಗೆ ನೋಡಿದರೆ ನಮ್ಮ ದೇಶದ ನ್ಯಾಯಾಂಗವನ್ನು ಕಾರ್ಯಾಂಗ ಮತ್ತು ಶಾಸಕಾಂಗಗಳು ಜೊತೆಗೂಡಿ ತಮ್ಮ ಕಿಸೆಯಲ್ಲಿ ಇಟ್ಟುಕೊಂಡಿವೆ. ತಮಗೆ ಬೇಕಾದ ಹಾಗೆ ತಿದ್ದುಪಡಿ ಮಾಡುತ್ತ ತಮಗೆ ಬೇಕಾದ ಹಾಗೆ ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಳ್ಳುತ್ತ  ಜನಸಾಮಾನ್ಯರ ಹಾದಿ ತಪ್ಪಿಸುತ್ತಾ ಇದ್ದಾರೆ. ಹೀಗಾಗಿ ನ್ಯಾಯಾಂಗದ ಮೇಲೆ ಜನ ಸಾಮಾನ್ಯರು ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಆಗಿದೆ.

ಆದರೆ ಬಹಳ ಹಿಂದೆ ನಮ್ಮ ಕನ್ನಡ ರಾಜನೊಬ್ಬ ರಾಜದ್ರೋಹದ ಆಪಾದನೆ ಮೇಲೆ ಮುಂದೆ ರಾಜ್ಯವನ್ನು ಅಳುವ ಯುವರಾಜ ತನ್ನ ಸ್ವಂತ ಮಗ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಗ ಅವನಿಗೆ ಏನನ್ನು ಶಿಕ್ಷೆ ಕೊಟ್ಟಿರಬಹುದು ನೀವೇ ಊಹಿಸಿ…

ಮಹಾರಾಜನು ತನ್ನ ಮಗ ಯುವರಾಜನಿಗೆ  ನೀಡಿದ ಶಿಕ್ಷೆ ಅತ್ಯಂತ ಘೋರವಾದ  ” ಮರಣ ದಂಡನೆ “. 

ಅ ಮಹಾರಾಜ ಮತ್ತಾರು ಅಲ್ಲ ಕನ್ನಡ ಪ್ರಸಿದ್ದ ರಾಜ ಮನೆತನದ ಕವಿರಾಜ ಮಾರ್ಗದ ಕರ್ತೃ  ” ಅಮೋಘ ವರ್ಷ ನೃಪತುಂಗ ”  ಅವನ ಸ್ವಂತ ಮಗನೆ ರಾಜದ್ರೋಹ ಹೊತ್ತ ಆರೋಪಿ ” ಕೃಷ್ಣ” . ಇಂದಿನ ವಾಸ್ತವದಲ್ಲಿ ಇದು ಸಾಧ್ಯವೇ. ಊಹೆಗೂ ನಿಲುಕದ ಸತ್ಯ.

ನ್ಯಾಯಾಂಗದ ಮುಂದೆ ಎಲ್ಲರು ಸಮಾನರು ಎಂದು ವಿಶ್ವಕ್ಕೆ ತೋರಿಸಿ ಕೊಟ್ಟ ಕೀರ್ತಿ ಮೊದಲು ನಮ್ಮ ಹೆಮ್ಮೆಯ ಕನ್ನಡಿಗನಿಗೆ ಸಲ್ಲುತ್ತದೆ.

 ಅಮೋಘ ವರ್ಷ ನೃಪತುಂಗ

ಯುವರಾಜ ಕೃಷ್ಣದೊಡ್ಡ ಸಾಮ್ರಾಟನಾಗಿ ಮೆರೆಯಬೇಕೆಂಬ ಮಹಾನ್ ಅಸೆ ಅಮೊಘವರ್ಷನಿಗೆ ಇತ್ತು. ಆದರೆ ಕೃಷ್ಣನು ಕೇವಲ ಮೋಜಿನ ವಿಲಾಸಿ ಜೀವನವನ್ನು ಕಳೆಯಲು ಆರಂಭಿಸಿದನು. ಕೃಷ್ಣನಿಗೆ ರಣ ವಿದ್ಯೆ ಹೇಳಿಕೊಟ್ಟ ಬಂಕೆರಸ ಇದನ್ನು ಕಂಡು ಯುವರಾಜ ಪಟ್ಟ ಕೊಟ್ಟರೆ ಸರಿ ಹೋಗಬಹುದು ಎನ್ನುವ ಸಲಹೆ ನೀಡಿದನು. ಅಮೋಘ ವರ್ಷನು ಕೃಷ್ಣನಿಗೆ ಯುವರಾಜ ಪಟ್ಟವನ್ನು ನೀಡಿದ ಆದರೆ ಕೃಷ್ಣ ಬದಲಾಗಲಿಲ್ಲ ರಾಷ್ಟ್ರಕೂಟರ ಶತ್ರುಗಳಾದ ಚೆದಿಯ ಶಂಕರ ಗಣ ಮತ್ತು ನೋಲಂಬದ ವಾಡಿಯ ವಂಗಿಯರಸರು  ಇದೆ ಸಮಯವನ್ನೇ ಕಾಯುತ್ತ ಇದ್ದರು. ಯುವರಾಜನನ್ನು ಸಂಧಿಸಿ ರಾಜ್ಯವನ್ನು ಕಿತ್ತು ಕೊಳ್ಳುವ ಯೋಜನೆಯನ್ನು ನಿರೂಪಿಸಿ ಯುವರಾಜನನ್ನು ಹೆಣ್ಣು ಮತ್ತು ಮದಿರೆಯ ದಾಸನನ್ನಾಗಿ ಮಾಡಿ ಅವರು ಹೇಳಿದ ಹಾಗೆ ಕೇಳುವ ರೀತಿಯಲ್ಲಿ ಕೃಷ್ಣನನ್ನು ತಯಾರು ಮಾಡಿದರು .

ಚೆದಿಯ ಶಂಕರ ಗಣ ಮತ್ತು ನೋಲಂಬದ ವಾಡಿಯ ವಂಗಿಯರಸರು , ಬಂಕೆರಸನು ಅಮೊಘವರ್ಷನಿಂದ ಅಧಿಕಾರ ಕಿತ್ತು ಕೊಂಡು ತನ್ನ ಮಗ ಲೋಕದಿತ್ಯನನ್ನು ಸಿಂಹಾಸನದ ಮೇಲೆ ಕೂರಿಸುವ ಹುನ್ನಾರ ಇದೆ ಎಂದು ಕೃಷ್ಣನಿಗೆ ತಲೆ ಕೆಡಿಸಿದರು. ಇದರಿಂದ ಕೃಷ್ಣನು ತಾನೆ ರಾಷ್ಟ್ರಕೂಟ ಚಕ್ರವರ್ತಿ ಎಂದು ಸಾರಿ ತಂದೆಯ ವಿರುದ್ದ ತಿರುಗಿ ಬಿದ್ದು ಯುದ್ದ ಸಾರಿದನು. ಆದರೆ ಯುದ್ದದಲ್ಲಿ ಸೋಲು ಅನುಭವಿಸಿದನು. ಇನ್ನೇನು ತನು ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿ ಇದ್ದಾಗ ಅವನ ಹೆಂಡತಿ ಬಂದು ರಕ್ಷಿಸಿದಳು. ಕೊನೆಗೆ ಕೃಷ್ಣ ಬಂಕೆರಸನಿಗೆ ಶರಣಾದನು.

ಮಹಾಸಭೆಯಲ್ಲಿ ಸೆರೆಯಾಳು ಕೃಷ್ಣನಿಗೆ ರಾಜದ್ರೋಹದ ಆರೋಪದ ಮೇಲೆ  ನೃಪತುಂಗ ಮರಣದಂಡನೆ ವಿಧಿಸಿದ. ಆದರೆ ಕೃಷ್ಣನ  ಹೆಂಡತಿಯ ಮೊರೆ , ಪ್ರಜಾ ನಾಯಕರ ಸಮರ್ಥನೆಗೆ ಮಣಿದು ನೃಪತುಂಗ ಮಗನನ್ನು ಕ್ಷಮಿಸಿ. ಕೃಷ್ಣನಿಗೆ  ತನ್ನ ಸೇವೆಯನ್ನು ಪ್ರಜೆಗಳಿಗೆ ಮೀಸಲಿಡುವಂತೆ ಅಜ್ಞಾಪಿಸಿದನು.

ತನ್ನ ಜೀವನವನ್ನು ಪ್ರಜೆಗಳ ಸೇವೆಯಲ್ಲಿ ಕಳೆದ ನೃಪತುಂಗನು ಅವರ ಬಗ್ಗೆ ಸದಾ ಕಾಳಜಿಯನ್ನು ತೋರಿಸುತ್ತಿದ್ದನು. ಒಮ್ಮೆ ರಾಜ್ಯದಲ್ಲಿ ಭೀಕರ ಕ್ಷಾಮ ಆವರಿಸಿತು . ನೃಪತುಂಗನು ಇದರ ಚಿಂತೆಯಲ್ಲೇ ಕಳೆಯ ತೊಡಗಿದನು. ಹೀಗಿರುವಾಗ ಒಂದು ರಾತ್ರಿ ಕನಸಿನಲ್ಲಿ  ಕೊಲ್ಲಾಪುರದ ಲಕ್ಷ್ಮಿ ಬಂದು ಎಡಗೈ  ಹೆಬ್ಬಟ್ಟನ್ನು ನನಗೆ ಅರ್ಪಿಸುವಂತೆ ಆಜ್ಞೆ ಮಾಡಿದಳು. ನೃಪತುಂಗ ಎಡಗೈ  ಹೆಬ್ಬಟ್ಟನ್ನು ಕತ್ತಿಯಿಂದ ಕತ್ತರಿಸಿ ಲಕ್ಷ್ಮಿಯ ಪಾದದಲ್ಲಿ ಇಟ್ಟನಂತೆ. ಆಗ ಕ್ಷಾಮ ತಾನಾಗೆ ಹಿಂದೆ ಸರಿಯಿತಂತೆ.

ಇವನ ರಾಜ್ಯ ಕಾವೇರಿಯಿಂದ ಗೋದಾವರಿಯವರೆಗೂ  ವಿಸ್ತಾರ ಇತ್ತೆಂದು ಕವಿರಾಜ ಮಾರ್ಗದಲ್ಲಿ ವರ್ಣನೆ ಇದೆ.  ಇವನು ಅರವತ್ತಮೂರು ವರ್ಷ ರಾಜ್ಯವಾಳಿದನು . ಇವನ ಕೀರ್ತಿ ದೇಶ ವಿದೇಶಗಳಿಗೂ ಹಬ್ಬಿತ್ತು. ಚೀನಾ, ಅರೇಬಿಯಾ ದೇಶದ ರಾಯಭಾರಿಗಳು ಇವನ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದರು.

ಇಂತಹ ಮಹಾನ್ ಪುರುಷನ ಪಾದಧೂಳಿಯಿಂದ ಪುನಿತವಾದ ಈ ನೆಲದಲ್ಲಿ ಇಂದು ನಮ್ಮ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನು ಪ್ರತಿನಿಧಿಸುವ ಪ್ರತಿನಿಧಿಗಳಿಗೆ ಅಮೋಘ ವರ್ಷ ನೃಪತುಂಗನು ಮಾದರಿಯಲ್ಲವೇ?