Monthly Archives: January 2024

ನೀರವತೆಯಲ್ಲಿನ ನೀಲಗುಂದ ಭೀಮೇಶ್ವರ ಪರಿಸರ..

ಹೊಸ ವರ್ಶದ ಮೊದಲ ದಿನ ಯಾವುದಾದರೂ ಹೊಸ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಮನಸ್ಸು ಹಂಬಲಿಸುತ್ತಿತ್ತು ಹಾಗಾಗಿ ಹೊಸ ಜಾಗದ ಅನ್ವೇಷಣೆಯಲ್ಲಿ ತೊಡಗಿದ್ದಾಗ ಕಂಡು ಬಂದದ್ದು ಹರಪ್ಪನಹಳ್ಳಿ ತಾಲೂಕಿನ ನೀಲಗುಂದ ಭೀಮೇಶ್ವರ ದೇವಸ್ಥಾನ. ದಾವಣಗೆರೆಯಿಂದ ಸುಮಾರು ಕೊಂಡಜ್ಜಿ ಮಾರ್ಗವಾಗಿ ೪೫ ಕಿಲೋಮೀಟರು ದೂರದ ಪ್ರಯಾಣ ಮಾಡಿ ನೀಲಗುಂದ ತಲುಪಿದ್ದಾಯಿತು. ನೀಲಗುಂದ ಗ್ರಾಮದಿಂದ ನಿರ್ಜನವಾದ  ಜಾಲಿ ಕವಿದ ರಸ್ತೆಯಲ್ಲಿ ಸಾಗುತ್ತಿದ್ದಂತೆ ಕಾಣುವುದು ಕೆರೆಯ ಏರಿ, ಹಾಗೆ ಏರಿಯೇರಿ ಸಾಗುತ್ತಿದ್ದಂತೆ ಕೆರೆ ಬದಿಯ ಅಂಚಿನಲ್ಲಿ ಕಾಣುವುದು ಈ ಅದ್ಭುತವಾದ ದೇಗುಲ. ದೇಗುಲದ ಸುತ್ತಮುತ್ತ ಜನವಸತಿಯಿಲ್ಲದ ಕಾರಣ ಸಂಪೂರ್ಣ ನಿರ್ಜನ ಪ್ರದೇಶ ಅದು. ನಿರ್ಜನವೆಂದರೆ   ಪುರಾತತ್ವ ಇಲಾಖೆಯ ಸಿಬ್ಬಂದಿ ಬಿಟ್ಟರೆ ಮತ್ತಾರು ಅಲ್ಲಿ ಕಂಡು ಬರುವುದಿಲ್ಲ. 

ಸುಮಾರು ೧೧ನೇ  ಶತಮಾನದ ಅಂತ್ಯದಲ್ಲಿ ಕಲ್ಯಾಣಿ ಚಾಲುಕ್ಯರ ಈ ಪ್ರದೇಶದಲ್ಲಿ ದೇವಾಲಯದ ನಿರ್ಮಾಣ ಮಾಡಿದರು . ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೀಲಗುಂದವು  ಬಳಪದ ಕಲ್ಲಿನ ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು ಹಾಗಾಗಿ ಸಂಪೂರ್ಣ ದೇಗುಲದ ನಿರ್ಮಾಣದಲ್ಲಿ ಬಳಪದ ಕಲ್ಲನ್ನು ಬಳಸಿ ಅತ್ಯಂತ ನಾಜೂಕು ಹಾಗು ಕಲಾತ್ಮಕವಾಗಿ  ದೇಗುಲವನ್ನು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ. 

ದೇವಾಲಯದ  ಮುಖ್ಯ ದ್ವಾರವು ಪೂರ್ವಾಭಿಮುಖವಾಗಿ ಇದ್ದು ದ್ವಾರದ ಎದುರಿಗೆ ಸೂರ್ಯ ಚಂದಿರರ ಗರ್ಭಗುಡಿ ಇದೆ. ದೇಗುಲದ ಪೂರ್ವ ದಿಕ್ಕಿನಲ್ಲಿ ವಿಶಾಲವಾದ ಕೆರೆಯಿದೆ. ಈ ಕೆರೆಯ ದಿಬ್ಬದ ಅಂಚಿನ ಮೇಲೆಯೇ ಈ ದೇಗುಲವನ್ನು ನಿರ್ಮಿಸಲಾಗಿದೆ. 

ದೇವಾಲಯದ ಒಳಗೆ ಪಶ್ಚಿಮ , ಉತ್ತರ, ದಕ್ಷಿಣಕ್ಕೆ ಮೂರು ಗರ್ಭಗುಡಿಯಿದೆ ಹಾಗೂ ದೇವಾಲಯದ ಹೊರಗೆ  ಪೂರ್ವಕ್ಕೆ ಮತ್ತೊಂದು ಗರ್ಭಗುಡಿಯಿದೆ . ದೇವಾಲಯವು ಒಟ್ಟು ನಾಲ್ಕು ಗರ್ಭಗುಡಿಗಳನ್ನು ಹೊಂದಿದೆ.  ಪ್ರತಿಯೊಂದು ಗರ್ಭಗೃಹವು ಅಂತರಾಳವನ್ನು ಹೊಂದಿದ್ದು ಎಲ್ಲವೂ ಸಭಾಮಂಟಪಕ್ಕೆ ತೆರೆದುಕೊಂಡಿವೆ. ಇಲ್ಲಿನ ಮುಖ್ಯ ದೈವ ಭೀಮೇಶ್ವರನನ್ನು ಪಶ್ಚಿಮದ ಗರ್ಭಗುಡಿಯಲ್ಲಿ ಪೂರ್ವಾಭಿಮುಖವಾಗಿ  ಪ್ರತಿಷ್ಠಾಪಿಸಿದ್ದಾರೆ. ಉತ್ತರ ಮತ್ತು ದಕ್ಷಿಣದ ಗರ್ಭಗುಡಿಯಲ್ಲಿ ಯಾವುದೇ ವಿಗ್ರಹಗಳು ಕಂಡು ಬರುವುದಿಲ್ಲ. ಈ ಉತ್ತರ ಮತ್ತು ದಕ್ಷಿಣದಲ್ಲಿನ ಗರ್ಭಗುಡಿಯಲ್ಲಿ ರಹಸ್ಯವಾದ  ಸುರಂಗ ಮಾರ್ಗವಿದ್ದು ಅದು  ಗೋಣಿ ಬಸವೇಶ್ವರ ದೇಗುಲಕ್ಕೆ ಸಂಪರ್ಕವಿದ್ದು. ಸದ್ಯಕ್ಕೆ ಅದನ್ನು ಮುಚ್ಚಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿಯೇ ಇದ್ದ ದೇಗುಲದ ಮೇಲ್ವಿಚಾರಕರು ತಿಳಿಸಿದರು. ಸಭಾಮಂಟಪವು ಸುಂದರವಾದ ವಿನ್ಯಾಸ ಹೊಂದಿರುವ ನಾಲ್ಕು ಸ್ಥಂಭಗಳಿಂದ ಮಾಳಿಗೆಯು ಆಧಾರಗೊಂಡಿದೆ. ಸಭಾಮಂಟಪದ ಪೂರ್ವಕ್ಕೆ ಕೆರೆಯಿದೆ.  ದೇಗುಲದ ಮುಖ್ಯ ಗೋಪುರದಲ್ಲಿನ ಕೆತ್ತನೆ ನಿಜಕ್ಕೂ ಅಧ್ಭುತ ಹಾಗೂ ನಮ್ಮವರ ತಾಂತ್ರಿಕ ಕೌಶಲ್ಯದ ಹಿರಿಮೆಯನ್ನು ಎತ್ತಿತೋರುತ್ತದೆ. 

                                                             ದೇವಾಲಯದ ಹೊರಭಿತ್ತಿಯಲ್ಲಿ ಹೊರ ಮತ್ತು ಹಿನ್ನಸಂತಗಳಿಂದ ಕೊಡಿದ್ದು ,  ಅರ್ಧಸ್ಥಂಭಗಳನ್ನು ನಿರ್ಮಿಸಿ ಅವುಗಳ ಮೇಲೆ ವೇಸರ ಮತ್ತು ದ್ರಾವಿಡ ಶೈಲಿಯ ಕಿರು ಗೋಪುರಗಳನ್ನು ನಿರ್ಮಿಸಲಾಗಿದೆ. ಪಶ್ಚಿಮದ ಮುಖ್ಯ ಗರ್ಭಗೃಹದ ಮೇಲಿನ ಗೋಪುರದ ಮೇಲೆ ವೇಸರ ಶೈಲಿಯ ಶ್ರೇಣೀಕೃತ ಕಿರು ಗೋಪುರಗಳಿದ್ದು ತ್ರಿಕಳ ವಿಮಾನವಿದೆ. ಪ್ರತಿಯೊಂದು ತಳವೂ ಶಾಲಾ, ಕೂಟಾ, ಪಂಜರವನ್ನು ಹೊಂದಿದ್ದು ಪ್ರತಿ ಶಾಲಾದಲ್ಲಿ ಶಿವ ಮತ್ತು ನಟರಾಜ ಮುಂತಾದ ಮೂರ್ತಿಗಳನ್ನು ಕಾಣಬಹುದು. ಗರ್ಭಗೃಹದ ದ್ವಾರಗಳು ಅಲಂಕೃತ ಪಂಚ ಶಾಖೆಗಳನ್ನು ಹೊಂದಿದ್ದು ತಳಭಾಗದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲರು ಮತ್ತು ಚಾಮರಧಾರಿಣಿಯರನ್ನು ಕಾಣಬಹುದು. ಸಭಾಮಂಟಪದಲ್ಲಿ ನಯಗೊಳಿಸಿದ ನಾಲ್ಕು ಅಲಂಕೃತ ಸ್ಥಂಭಗಳಿದ್ದು ಮಧ್ಯಭಾಗದಲ್ಲಿ ವೇದಿಕೆಯಿದೆ. ದೇಗುಲದ ಮೇಲ್ಚಾವಣಿಯಲ್ಲಿ ಅದ್ಭುತವಾದ ಹೂವಿನ ಕೆತ್ತನೆಯಿದೆ.    

ಗೋಪುರದಲ್ಲಿ ಕಂಡು ಬರುವ  ವಿಗ್ರಹಗಳ ಕೆತ್ತನೆಯು ತಸು ಹೊಯ್ಸಳರ ಶಿಲ್ಪಕಲೆಗೆ ಹೋಲುತ್ತದೆ. ದೇವಾಲಯದ ಒಳ ಆವರಣದಲ್ಲಿ ದೇವಕೋಷ್ಟಕಗಳಿದ್ದು ಅವುಗಳಲ್ಲಿ ಗಣೇಶ, ಮಹಿಷಮರ್ಧಿನಿ ಸಪ್ತಮಾತೃಕೆಯರು ಮತ್ತು ಯಕ್ಷ ಮೂರ್ತಿಗಳಿವೆ. ಸಭಾಮಂಟಪದಲ್ಲಿ ಸಂಧಿಯನ್ನು ಪಶ್ಚಿಮಾಭಿಮುಖವಾಗಿ ಇಡಲಾಗಿದೆ. ಪಾಂಡವರ ವನವಾಸದ ಕಾಲದಲ್ಲಿ ಇಲ್ಲಿ ಈಶ್ವರನನ್ನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ. ಇದಲ್ಲದೆ  ಭೀಮೇಶ್ವರನು ನಂಬಿದ ಭಕ್ತರ  ಮನದ ಇಚ್ಛೆಯನ್ನು ಪೂರೈಸುವನು ಎಂಬ ನಂಬಿಕೆಯಿದೆ.

  

ದೇಗುಲದ ಎದುರಿಗಿನ ವಿಶಾಲವಾದ ಕೆರೆಗೆ ಇಳಿಯಲು ಮೆಟ್ಟಿಲುಗಳಿದ್ದು, ಕುಳಿತು ಅಲ್ಲೇ ಸುತ್ತ ಮುತ್ತಲಿನ ಪರಿಸರವನ್ನು ಸವಿಯಬಹುದು. ಆಸ್ತಿಕನಿಗೆ ದೇವಾಲಯದ ಒಳಾಂಗಣ  ದೈವದ ಸಾಕ್ಷತ್ಕಾರವಾದರೆ , ನಾಸ್ತಿಕನಿಗೆ ದೇಗುಲದ ಹೊರಾಂಗಣ ತಮ್ಮ ನಂಬಿಕೆಯಲ್ಲಿ ಸಾಕ್ಷತ್ಕಾರವಾಗುತ್ತದೆ  ಎಂದರೆ ತಪ್ಪಾಗಲಾರದು ಹಾಗಾಗಿ ದೇಗುಲ ಹೊರಾಂಗಣ  ಪ್ರಶಾಂತತೆ ಬಯಸುವವರಿಗೆ ಪ್ರಸನ್ನತೆ ಮೂಡಿಸುವಂತಿದೆ.