ಲಕ್ಷ ದ್ವೀಪಗಳ ಮಹಾ ಯಾನ – ೧೬ – ಕಲ್ಪನಾತೀತ ಕಲ್ಪೆನಿ

ಅದಾಗಲೇ ದೋಣಿ ಅಗಟ್ಟಿಯಿಂದ ಸುಮಾರು ಅರ್ಧ ಪರ್ಲಾಂಗ್ ದೂರ ಸಾಗಿತ್ತು. ಅಗಟ್ಟಿ ಜಟ್ಟಿಯಿಂದ ನಮ್ಮ ಕವರತ್ತಿ ನಾವೆ ಕಡೆಗೆ ಹೋಗುತ್ತ ಇದ್ದಾಗ ತಕ್ಷಣ ನೆನೆಪಿಗೆ ಬಂದಿದ್ದು ನಾವು ಕಿನಾರೆಯಲ್ಲಿ ಇಟ್ಟಿದ್ದ ನಮ್ಮ ಸಾಮಾನು ಸರಂಜಾಮುಗಳ ಬಗ್ಗೆ. ತಕ್ಷಣ ನಮ್ಮ ಪರಿಕರಗಳು ಸರಿ  ಇವೆಯಾ ಎಂದು ಪರೀಕ್ಷಿಸಿದ ಮೇಲೆ ಮೂಡಿದ ಭಾವನೆ ಲಕ್ಷದ್ವೀಪದ ನಾಗರಿಕರು ನಿಜವಾಗಿಯೂ ಗೌರವಕ್ಕೆ ಅರ್ಹರು ಎಂಬುದು.  ಇಲ್ಲಿ ಕಳ್ಳತನ ಎಂಬುವ ಪದಕ್ಕೆ  ಬಹುಶ  ಸ್ಥಾನವೇ  ಇಲ್ಲ. ಭಾರತ ಭೂಪ್ರದೇಶದಿಂದ ಬಹು ದೊರದಲ್ಲಿದ್ದರು ಅಗಟ್ಟಿ ದ್ವೀಪದಲ್ಲಿದ್ದ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ಮಹಾ ಅಪರಾಧ ಎನ್ನುವ ಕೇಸ್ಗಳು ಇಲ್ಲದೇ ಆರಕ್ಷಕರು ಸಹ ಆರಾಮಾಗಿದ್ದರು. ಏನೇ ವ್ಯಾಜ್ಯಗಳಿದ್ದರು ತಮ್ಮ ತಮ್ಮಲ್ಲಿಯೇ ಕುಳಿತು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳುತ್ತಿದ್ದರು. ಹಾಗಾಗಿ ಇಲ್ಲಿ ದೊಡ್ಡ ಮಟ್ಟದ ಅಪರಾಧಗಳು ಇಲ್ಲವೇ ಇಲ್ಲ.  ನಾವು ಕವರಟ್ಟಿ ನಾವೇಯ ಎಂಬಾರ್ಕೇಷನ್ ಬಾಗಿಲ ಮೂಲಕ ಮತ್ತೆ ಸಾಗಿ ನಮ್ಮ ಕ್ಯಾಬಿನ್ ಕಡೆಗೆ ಹೆಜ್ಜೆ ಹಾಕಿದೆವು. ನಾಳೆ ನಾವು ಕಲ್ಪೆನಿ ದ್ವೀಪಕ್ಕೆ ತಸು ಬೇಗ  ಭೇಟಿ ನೀಡುತ್ತಿದ್ದರಿಂದ ನಮ್ಮ ನಾಳೆಯ ಪರಿಕರಗಳನ್ನು ಹೊಂದಿಸಿ, ಅಂದಿನ ಊಟ ಮುಗಿಸಿ ಬೇಗನೆ ನಿದ್ದೆಗೆ ಜಾರಿದೆವು. 

ಕಲ್ಪೇನಿ ದ್ವೀಪವು ಭಾರತದ ನೈಋತ್ಯ ಕರಾವಳಿಯ ಲಕ್ಷದ್ವೀಪದ ಪ್ರಾಚೀನ ದ್ವೀಪಸಮೂಹದಲ್ಲಿ ನೆಲೆಸಿರುವ ಸ್ವರ್ಗವಾಗಿದೆ. ಸ್ಫಟಿಕದಷ್ಟು  ಸ್ಪಷ್ಟ ವೈಡೂರ್ಯದ ಸಾಗರದ ನೀರು, ಪುಡಿ ಬಿಳಿ ಮರಳು ಮತ್ತು ಹೇರಳವಾದ ಸಮುದ್ರ ಜೀವಿಗಳೊಂದಿಗೆ, ಕಲ್ಪೇನಿ ದ್ವೀಪವು ಪ್ರಕೃತಿ ಪ್ರಿಯರಿಗೆ ಮತ್ತು ಕಡಲತೀರದ ಉತ್ಸಾಹಿಗಳಿಗೆ ಪ್ರಶಾಂತ ಮತ್ತು ರಮಣೀಯ ವಿಹಾರವನ್ನು ನೀಡುತ್ತದೆ. ಈ ದ್ವೀಪವು ತಿಲಕ್ಕಂ ಮತ್ತು ಪಿಟ್ಟಿಯ ಎರಡು ಸಣ್ಣ ದ್ವೀಪಗಳೊಂದಿಗೆ ಮತ್ತು ಉತ್ತರದಲ್ಲಿ ಜನವಸತಿಯಿಲ್ಲದ ಚೆರಿಯಮ್ ದ್ವೀಪವು ಒಂದೇ ಹವಳದ ದಿಣ್ಣೆಯನ್ನು ಹೊಂದಿದೆ. ಕಲ್ಪೇನಿಯ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಪೂರ್ವ ಮತ್ತು ಆಗ್ನೇಯ ತೀರದಲ್ಲಿ ಹವಳದ ಅವಶೇಷಗಳ ಬೃಹತ್ ಚಂಡಮಾರುತದ ದಂಡೆ. ಹಾಗಾಗಿ ಇಲ್ಲಿ ಬರಿಗಾಲಿನಲ್ಲಿ ನಡೆಯುವುದು ಕಷ್ಟಕರ ಮತ್ತು ತಸು ಅಪಾಯಕಾರಿ ಕೂಡ ಹೌದು. ಅಪ್ಪಿತಪ್ಪಿ ಕೋರಲ್ ಕಾಲಿಗೆ ಏನಾದರೂ ಚುಚ್ಚಿದರೆ ಅಂದಿನ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಂತೆ.  ಹಾಗಾಗಿ ನಮ್ಮ ಟೂರ್ ಮ್ಯಾನೇಜರ್ ಮುಂಚೆಯೇ ತಿಳಿಸಿದ್ದರು ಡೇಡ್ ಕೋರಲ್ಗಳು  ಅಗಾಧವಾಗಿ ಇವೆ ನೀರಿನಲ್ಲಿ ಇಳಿಯುವಾಗ ಪಾದುಕೆಗಳನ್ನು ಧರಿಸಿ ಎಂದು. ೧೮೪೭ ರಲ್ಲಿ ರಣ ಭಯಂಕರವಾದ ಚಂಡಮಾರುತವು ಈ ತೀರದಲ್ಲಿ ಬೃಹತ್ ಹವಳದ ಬಂಡೆಗಳನ್ನು ಎಸೆದಿದೆ ಎಂದು ನಂಬಲಾಗಿದೆ. ಬೇರೆಯಲ್ಲ ದ್ವೀಪಗಳಿಗೆ ಹೋಲಿಸಿದರೆ ಕಲ್ಪೆನಿ ಸಾಮಾಜಿಕವಾಗಿ ಪ್ರಗತಿಪರ ದ್ವೀಪವಾಗಿದೆ ಎಂದು ಹೇಳಬಹುದು. ಒಮ್ಮೆ ಮಹಿಳಾ ಶಿಕ್ಷಣವನ್ನು ನಿಷೇಧಿಸಿದಾಗ, ನಿಷೇಧವನ್ನೇ ಬಹಿಷ್ಕರಿಸಿ  ಹೆಣ್ಣು ಮಕ್ಕಳು  ಬಂಡೆದ್ದು ಮೊದಲು ಶಾಲೆಗೆ ಹೋಗುತ್ತಿದ್ದರು ಎಂದು ಕೇಳಿದಾಗ ನಂಬಲು ಆಗಲಿಲ್ಲ.  ನಮ್ಮ ರಾಜ್ಯದಲ್ಲಿ ಒಮ್ಮೆ ಸರ್ಕಾರ  ಹಿಜಾಬ್  ಬ್ಯಾನ್ ಮಾಡಿದಾಗ ನಮ್ಮ ಕೆಲವು ಹೆಣ್ಣು ಮಕ್ಕಳು  ಪರೀಕ್ಷೆಯನ್ನೇ ಬಹಿಷ್ಕರಿಸಿದ್ದು ನೆನಪಿಗೆ ಬಂತು, ಎತ್ತಣ ಕಲ್ಪೆನಿ ಎತ್ತಣ ಕರ್ನಾಟಕ..

ಹಾಗಾಗಿ ಕಲ್ಪೆನಿಯ ಹೆಣ್ಣು ಮಕ್ಕಳು ನಿಜಕ್ಕೂ ಆಧುನಿಕ ಯುಗದಲ್ಲಿಯೂ ಸಹ ನಮಗೆ ಶಿಕ್ಷಣ ಮುಖ್ಯ ಎಂದು ಸಾರುವ ಪ್ರಬುದ್ಧ ಪ್ರಗತಿ ಪರರು ಎನ್ನಬಹುದು. 

ಕಲ್ಪೆನಿಗೆ ಕಾಲಿಡುತ್ತಿದ್ದಂತೆ ಅನುಭವಕ್ಕೆ ಬಂದಿದ್ದು ಬೆರಗುಗೊಳಿಸುವ ಹವಳದ ಬಂಡೆಗಳು ಮತ್ತು ರೋಮಾಂಚಕ ಸಮುದ್ರ ಪರಿಸರ ವ್ಯವಸ್ಥೆ. ಬೇರೆ ದ್ವೀಪಕ್ಕಿಂತ ಇದೊಂದು ಭಿನ್ನ ಮತ್ತು ಅದ್ಭುತ ಲೋಕಕ್ಕೆ ಕರೆದೊಯುತ್ತದೆ . ತಾಳೆಗರಿಗಳಿಂದ ಕೂಡಿದ ಕಡಲತೀರಗಳು, ಮೃದುವಾಗಿ ತೂಗಾಡುವ ತೆಂಗಿನ ಮರಗಳು ಮತ್ತು ಹಿಂದೂ ಮಹಾಸಾಗರದ ಬೆಚ್ಚಗಿನ ಅಪ್ಪುಗೆಯಿಂದ ದ್ವೀಪವು ನಿಮ್ಮನ್ನು ಸ್ವಾಗತಿಸಲಾಗುತ್ತದೆ. ದ್ವೀಪದ ನೈಸರ್ಗಿಕ ಸೌಂದರ್ಯವು  ಎಂತಹವರನ್ನು ಮಂತ್ರ ಮುಗ್ಧಗೊಳಿಸುತ್ತದೆ. 

ಕಲ್ಪೇನಿ ದ್ವೀಪವು ಕಲ್ಪೇನಿ ಲಗೂನ್ ಎಂದು ಕರೆಯಲ್ಪಡುವ ಪ್ರಶಾಂತವಾದ ಆವೃತ ಪ್ರದೇಶಕ್ಕೆ ನೆಲೆಯಾಗಿದೆ. ಇದು ನೈಸರ್ಗಿಕ ಅದ್ಭುತವಾಗಿದೆ. ಆವೃತ ಪ್ರದೇಶದ ಶಾಂತ ಮತ್ತು ಆಳವಿಲ್ಲದ ನೀರು ಈಜು, ಕಯಾಕಿಂಗ್ ಮತ್ತು ಇತರ ನೀರಿನ ಚಟುವಟಿಕೆಗಳಿಗೆ ಸೂಕ್ತವಾದ ಪರಿಸರವನ್ನು  ಅನ್ನು ಒದಗಿಸುತ್ತದೆ. ಪ್ರಶಾಂತವಾದ ನೀರಿನ  ಮೇಲ್ಮೈಯಲ್ಲಿ ವಿಹರಿಸಿದರೆ ನೀರಿನ ಸ್ಪಷ್ಟತೆಗೆ ಆಶ್ಚರ್ಯಚಕಿತರಾಗಿ ಮತ್ತು ಸುತ್ತಮುತ್ತಲಿನ ಸಂಪೂರ್ಣ ಸೌಂದರ್ಯದಲ್ಲಿ ನಿಮ್ಮನ್ನು ಮುಳುಗಿಸಿ ಬಿಡುತ್ತದೆ ಈ ಕಲ್ಪೆನಿ ಎಂಬ ಮಾಯಾಂಗನೆ. 

ನಮ್ಮನ್ನು ಕಲ್ಪೆನಿಯ  ದ್ವೀಪದಲ್ಲಿರುವ “ಕೂಮೆಲ್ ಬೀಚ್ ರೆಸಾರ್ಟ್” ಗೆ ಕರೆತಂದು. ಅಲ್ಲಿನ ಎಳೆನೀರನ್ನು ವೆಲ್ ಕಮ್ ಡ್ರಿಂಕ್ ಆಗಿ ಮೊದಲ ಬಾರಿಗೆ ಕೊಟ್ಟರು  ಯಾಕೋ ಎಳೆನೀರು ಅಷ್ಟಾಗಿ ರುಚಿಸಲಿಲ್ಲ. ಅಲ್ಲಿಂದ ಸಮುದ್ರ ಮೇಲೆ ಕಟ್ಟಿದ ತೇಲಾಡುವ ಸೇತುವೆಯ ಮೇಲೆ ನಿಲ್ಲುತ್ತಿದಂತೆ ಕಂಡಿದ್ದು ಅಗಾಧವಾದ ಸಾಗರದಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತಿದ್ದ ಭಾರಿ ಗಾತ್ರದ ಕಡಲಾಮೆಗಳು. ನಮ್ಮನ್ನು ನೋಡುತ್ತಿದ್ದಂತೆ ಅವುಗಳ ಪ್ರಶಾಂತತೆಗೆ ಭಂಗವಾಗಿ ಅಲ್ಲಿಂದ್ದ ಒಂದೊಂದಾಗಿ ಕಾಲ್ಕಿಳಲು ಆರಂಭಿಸಿದವು ಆದರೂ ನಾವುಗಳು ಅವುಗಳನ್ನು ಬಿಡದೆ ಕ್ಯಾಮರಾದಲ್ಲಿ ಸೆರೆ ಮಾಡಿದ್ದೆ ಮಾಡಿದ್ದೂ. ಅದಲ್ಲದೆ ಕೆಲವೊಂದು ಬಣ್ಣದ ಮೀನುಗಳು ಹಾಗು ಸಮುದ್ರ ಸೌತೆಕಾಯಿ ಜೇವಿಗಳು ಭಾರಿ ಪ್ರಮಾಣದಲ್ಲಿ ಕಂಡು ಬಂದವು. 

ಅಲ್ಲಿಂದ ಕಾಣುವ ಪಿಟ್ಟಿ ದ್ವೀಪದ ದೃಶ್ಯ ಮಾತ್ರ ಎಂದೂ ಮರೆಯಲಾಗದ ದೃಶ್ಯ. ನಮಗಾಗಿ ಪಿಟ್ಟಿ ದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ಆಯೋಜಿಸಿದ್ದರು ಹಾಗಾಗಿ ಬೀಚ್ ರೆಸಾರ್ಟ್ ಇಂದ ಮತ್ತೊಂದು ದೋಣಿ ಬಳಸಿ ನಾವು ಹೋಗಬೇಕಿತ್ತು. ಹಾಗಾಗಿ ನಾವು ಮೋಟಾರು ದೋಣಿ ಏರಿ ಸಾಗುತ್ತಿದ್ದಂತೆ  ಸಾಗರದ ಅಡಿಯ ತುಂಬಾ ಸಮುದ್ರ ಸೌತೆಕಾಯಿಗಳೇ ಕಂಡು ಬಂದವು. ಪಿಟ್ಟಿ ದ್ವೀಪದಲ್ಲಿ ಸ್ನಾರ್ಕೆಲ್‌ ಕಿಟ್ ನೀಡಿದರು. ಈ ಪಿಟ್ಟಿ ದ್ವೀಪದಲ್ಲಿ ಜನವಸತಿಯಿಲ್ಲ, ಸಾಗರದ  ಉಬ್ಬರವಿಳಿತವಿದ್ದಲ್ಲಿ ಸಂಪೂರ್ಣವಾಗಿ ಮುಳುಗುವ ಪಿಟ್ಟಿ ದ್ವೀಪವನ್ನು ಸುತ್ತುವರಿದ ಕೋರಲ್ಗಳು ಹಾಗು ದಡದ ತುಂಬಾ ಬಿದ್ದಿರುವ ಅಲಂಕಾರಿಕ ನಿರ್ಜಿವ ಕೋರಲ್ಗಳು. ನಾವೆಲ್ಲರೂ ಸ್ರೋಕೆಲ್ಲಿಂಗ್ ಮರೆತು ಒಂದೊಂದಾಗಿ ಸಿಕ್ಕ ಬಣ್ಣ ಬಣ್ಣದ ವಿವಿಧ ರೀತಿಯ ಹವಳಗಳನ್ನು ನಮ್ಮ ಬ್ಯಾಗ್ಗೆ ಹಾಕಿಕೊಳ್ಳುವುದರಲ್ಲಿ ಮಗ್ನರಾದೆವು. ಪಿಟ್ಟಿ ದ್ವೀಪಕ್ಕೆ ಕಾಲಿಡುತ್ತಿದ್ದಂತೆ, ಬರಿ ಗಾಲಿನಲ್ಲಿ ಕೋರಲ್ ಮೇಲೆ ಕಾಲಿಟ್ಟು ಇಲ್ಲವೇ ತುಂಬಾ ಹರಿತವಾದ ಕಲ್ಲುಗಳಿಗೆ ತಾಗಿಸಿಕೊಂಡು  ಒಬ್ಬೊಬರಾಗಿ ಗಾಯಾಳುಗಳ ಪಟ್ಟಿ ಸೇರತೊಡಗಿದರು. ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. 

ಈಜು ಬಾರದ ನಮಗೆ ಸ್ನೋರ್ಕ್ಲಿಂಗ್ ಸಾಹಸಕ್ಕೆ ತರಬೇತುದಾರರ ಅವಶ್ಯಕತೆಯಿತ್ತು ಹಾಗಾಗಿ ನಮ್ಮ ಸರದಿ ಬಂದಂತೆ ನಮ್ಮ ಸ್ನೋರ್ಕೆಲ್ ಅಧ್ಯಾಯ ಆರಂಭವಾಯಿತು . ಅಬ್ಬಾ ಎಂತಹ ಬಣ್ಣ ಬಣ್ಣದ ಭಾರಿ ಗಾತ್ರದ ಜಲಚರಗಳು , ಬಗೆ ಬಗೆ ವಿನ್ಯಾಸದ ಕೋರಲ್ ಗಳು , ಸುಮ್ಮನೆ ಹಾಯಾಗಿ ಮಲಗಿರುವ ಸಮುದ್ರ ಸೌತೆಕಾಯಿಗಳು, ಒಂದೊಂದು ಜಲಚರಗಳ ಜಾಡು ಹಿಡಿದು ಹೋಗುತ್ತಿದ್ದಂತೆ ಮತ್ತೊಂದು ಜಲಚರಗಳ ಆಗಮನ , ನಿರ್ಗಮನ ಏಕಪ್ರಕಾರ ಸಾಗಿತ್ತು. ನಮ್ಮ ಸಮಯ ಮುಗಿಯುತ್ತಿದ್ದಂತೆ ನಾವಾಗಿಯೇ ಮತ್ತೆ ನೀರಿನಲ್ಲಿ ಮುಳುಗಿ ಸಾಗರದ ಪ್ರದಕ್ಷಣೆ ಮಾಡತೊಡಗಿದೆವು. ಇದ್ದಿದ್ದೂ ಒಂದೇ ಭಯ ಎಲ್ಲಿ ನಾವುಗಳು ಸಮುದ್ರ ಸೌತೆಕಾಯಿ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಬಿಟ್ಟೆವು ಎಂಬುದು.  ನಮ್ಮ ಅದೃಷ್ಟಕ್ಕೆ ನಮ್ಮಗಿಂತ ಅವುಗಳಿಗೆ ಭಯ ಜಾಸ್ತಿ ಹಾಗಾಗಿ ನಮ್ಮ ಕಾಲಿಗೆ ಸಿಗುವ ಮುಂಚೆಯೇ ಮಾಯವಾಗುತ್ತಿದ್ದವು. ನಾವೆಲ್ಲ ಆಯಾಸವಾಗುವರೆಗೂ ಈಜಿ ವಾಪಾಸ್ ದೋಣಿ ಹತ್ತಿ ಮತ್ತೆ ಕಲ್ಪೆನಿ ದ್ವೀಪಕ್ಕೆ ಬರುತ್ತಿದ್ದಂತೆ ಸ್ನಾನದ ಗೃಹಕ್ಕೆ ತೆರಳಿ ಬಟ್ಟೆ ಬದಲಾಯಿಸಿ ಊಟಕ್ಕೆ ಅಣಿಯಾದೆವು.  


Leave a comment