Category Archives: ಪ್ರೊ. ಟಿ.ಎಸ್. ವೆಂಕಣ್ಣಯ್ಯ

ಆರ್ಟ್ ಆಫ್ ಲರ್ನಿಂಗ್

ನಮ್ಮ ಹುಡುಗ ಬಹಳ ಬುದ್ದಿವಂತ ಕಣ್ರೀ, ಸಿಕ್ಕಾಪಟ್ಟೆ ಓದುತ್ತಾನೆ,  ಪುಸ್ತಕ ಕೈಯಲಿ ಹಿಡಿದು ಕೊಂಡ್ರೆ ಸಾಕು, ಎಷ್ಟೇ ಸಾರಿ ಹೆಸರು ಕೂಗಿ ಕರೆದರೂ ಅವನು ಕೇಳಿಸಿಕೊಳ್ಳಲ್ಲ, ಪುಸ್ತಕ ಓದುವುದರಲ್ಲಿ ಅಷ್ಟು ತಲ್ಲೀನನಾಗಿರುತ್ತಾನೆ ಅನ್ನುವ ಜನರನ್ನು ಬಹಳಷ್ಟು ಕೇಳಿರುತ್ತೇವೆ.  ನಾವು ಅಷ್ಟೇ, ಬರೀ ಪುಸ್ತಕ ಹಿಡಿದ್ಕೋಂಡು ಓದುವವರನ್ನೆ ಬುದ್ದಿ ಜೀವಿಗಳು, ಬುದ್ದಿವಂತ್ರು ಅಂತ ಒಂದು ಪ್ರಶಸ್ತಿ ಕೂಡ ಕೊಟ್ಟಿರುತ್ತೇವೆ ಅಲ್ವೇ. ಏನೇ ಅನ್ನಿ ಎಷ್ಟೇ ಓದಿದರೂ, ಓದಿದ್ದನ್ನು  ಗ್ರಹಿಸಿ  ಸರಿಯಾದ ಸಮಯಕ್ಕೆ ನಿರೂಪಿಸಿದರೆ ಮಾತ್ರ ನಾವು ಅವರನ್ನು ವಿಜಯಿಗಳೆನ್ನ ಬಹುದು.
 
ಸದ್ಯಕ್ಕೆ ಈಗ ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೇ ಖ್ಯಾತರಾಗಿದ್ದ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರ ಬಾಲ್ಯದಲ್ಲಿ ನಡೆದ ಒಂದು ಪ್ರಸಂಗ ನಿಮ್ಮ ಮುಂದೆ ಪ್ರಸ್ತುತ ಪಡಿಸುವೆ.

ಪ್ರೊ. ಟಿ.ಎಸ್. ವೆಂಕಣ್ಣಯ್ಯ

ಐದು ರೂಪಾಯಿ ಪರೀಕ್ಷೆಯಲ್ಲಿ  ಪಾಸಾದ ಬಾಲಕ ವೆಂಕಣ್ಣಯ್ಯ, ತಮ್ಮ ವಿದ್ಯಾಭ್ಯಾಸವನ್ನು  ಮುಂದುವರಿಸುವ ಸಲುವಾಗಿ ತಳುಕಿನಿಂದ  ಒಂಬತ್ತು ಮೈಲಿ ದೂರದಲ್ಲಿರುವ ಚಳ್ಳಕೆರೆಯ ಇಂಗ್ಲಿಷ್ ಲೋಯರ್ ಸೆಕೆಂಡರಿ ಶಾಲೆಗೆ ಸೇರಿದರು. ಚಳ್ಳಕೆರೆಯಲ್ಲಿ ವಸತಿ ಮತ್ತು ಊಟಕ್ಕಾಗಿ ತಮ್ಮ ಸಂಬಂಧಿ ಶೇಖದಾರರಾದ ಶ್ರೀಕಂಠ ದೀಕ್ಷಿತರ ಮನೆಯಲ್ಲಿ ತಮ್ಮ ನೆಲೆ ಕಂಡುಕೊಂಡರು. ವೆಂಕಣ್ಣಯ್ಯನವರು ಶ್ರೀಕಂಠ ದೀಕ್ಷಿತರ ಅಳಿಯ ಲಕ್ಷ್ಮಿಪತಿಯ ಜೊತೆಯಲ್ಲಿ ಮನೆಯ ಒಂದು ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು. ಲಕ್ಷ್ಮಿಪತಿಯು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯ ಲೋಯರ್ ಸೆಕೆಂಡರಿ ಪರೀಕ್ಷೆ ಕಟ್ಟಿದ್ದರು , ಆದರೆ ವೆಂಕಣ್ಣಯ್ಯ ಇಂಗ್ಲಿಷ್ ಲೋಯರ್ ಸೆಕೆಂಡರಿ ಮಾತ್ರ ಕಟ್ಟಿದ್ದರು.

ಲಕ್ಷ್ಮೀಪತಿ ಎಷ್ಟಿದ್ದರೂ ದೀಕ್ಷಿತರ ಅಳಿಯ ಆದ್ದರಿಂದ ಅವರಿಗಾಗಿ ಊಟ , ಉಪಚಾರದಲ್ಲಿ ಒಂದು ಚೂರು ತೊಡಕಾಗದಂತೆ ದೀಕ್ಷಿತರ ಮನೆಯವರು ಎಚ್ಚರವಹಿಸಿದ್ದರು. ಹಾಗಾಗಿ ಲಕ್ಷ್ಮೀಪತಿಗೆ ಮಲಗಲು ಮಂಚ, ಓದಲು ಮೇಜು ,ಖುರ್ಚಿ ಸಮಯಕ್ಕೆ ತಕ್ಕಂತೆ ಹಾಲು ಹಣ್ಣಿನ ಉಪಚಾರ ನಡೆಯುತ್ತಿತ್ತು. ಆದರೆ ವೆಂಕಣ್ಣಯ್ಯನವರಿಗೆ ಮನೆಯಿಂದ ತಂದ ಈಚಲು ಚಾಪೆಯೆ ಹಾಸಿಗೆಯಾಗಿತ್ತು. ಶಾಲೆಯಿಂದ ಬಂದ ತಕ್ಷಣ ಲಕ್ಷ್ಮೀಪತಿಯು ಪುಸ್ತಕವನ್ನು ಕೈಗೆತ್ತಿಕೊಂಡು  ಗಂಭೀರ ಧ್ವನಿಯಲ್ಲಿ ಓದಲು ಆರಂಭಿಸಿದರೆ ಸಾಕು, ಓದು ಮುಗಿಯುವ ತನಕ ಯಾರು ಕರೆದರೂ ಬರುತ್ತಿರಲಿಲ್ಲ. ಅಷ್ಟು ತಲ್ಲೀನನಾಗುತ್ತಿದ್ದರು ಲಕ್ಷ್ಮೀಪತಿಯವರು. ಆದರೆ ವೆಂಕಣ್ಣಯ್ಯ ಶಾಲೆಯಿಂದ ಬಂದ ತಕ್ಷಣ ಪಠ್ಯ ಪುಸ್ತಕವನ್ನು ಬಿಟ್ಟು ಯಾವುದೂ ಕಥೆ ಪುಸ್ತಕವನ್ನು ಓದಲು ಆರಂಭಿಸುತ್ತಿದ್ದರು.

ವೆಂಕಣ್ಣಯ್ಯನವರ ಈ ವರ್ತನೆಯನ್ನು ಕಂಡ ಲಕ್ಷ್ಮೀಪತಿ “ ಲೋ ವೆಂಕಣ್ಣಯ್ಯ , ನೀನು ಈ ಹಾಳಾದ  ಕಥೆ ಪುಸ್ತಕ ಬಿಟ್ಟು ಪಠ್ಯ ಪುಸ್ತಕ ಯಾವಾಗ ಓದುತ್ತಿಯಾ, ಹೀಗೆ ಆದರೆ ಪರೀಕ್ಷೆ ಹೆಂಗೆ ಪಾಸು ಮಾಡುತ್ತೀಯಾ? “ .  ಎಂದು ಕೇಳುತ್ತಿದ್ದರು.
“ ಭಾವ ನೀವು ಚೆನ್ನಾಗಿ ಓದುತ್ತಿರಾ, ಇನ್ನೂ ಸ್ವಲ್ಪ ಜೋರಾಗಿ ಓದಿ “ ಎಂದು ವೆಂಕಣ್ಣಯ್ಯ ಲಕ್ಷ್ಮೀಪತಿಯನ್ನು ಹುರಿದುಂಬಿಸುತ್ತಿದ್ದರು, ದೀಕ್ಷಿತರ ಮನೆಯವರು ಸಹ “ ಸೋಂಬೇರಿ , ಇಂತಹವನಿಗೆ ವಿದ್ಯೆ ಹತ್ತುವುದಿಲ್ಲ ಬಿಡು “ ಎಂದು ಬಯ್ಯುತ್ತಿದ್ದರು. ಆದರೆ ವೆಂಕಣ್ಣಯ್ಯ ಯಾವುದನ್ನೂ ತೆಲೆಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಇರುತ್ತಿದ್ದರು. ಹೀಗೆ ಮೂರು ವರ್ಷ ನಡೆಯಿತು.

ಕಡೆಗೆ ಪರೀಕ್ಷೆಯ ದಿನ ಬಂದೆ ಬಿಟ್ಟಿತು, ವೆಂಕಣ್ಣಯ್ಯ ಪರೀಕ್ಷೆಯನ್ನು ಅರ್ಧ ಗಂಟೆ ಮೊದಲೇ ಬರೆದು ಉತ್ತರ ಪತ್ರಿಕೆಯನ್ನು ಕೊಟ್ಟು ತಮ್ಮ ಊರಿನ ಹಾದಿ ಹಿಡಿದರು. ಆದರೆ ಲಕ್ಷ್ಮಿಪತಿ ಪರೀಕ್ಷಾ ಸಿಬ್ಬಂದಿ ಸಮಯ ಮುಗಿದು ಉತ್ತರ ಪತ್ರಿಕೆ ವಾಪಸ್ ಪಡೆಯುವವರೆಗೂ ಬರೆಯುತ್ತಲೇ ಇದ್ದನು.

ಉತ್ತರ ಪತ್ರಿಕೆಯ ಮೌಲ್ಯ ಮಾಪನದ ನಂತರ ಫಲಿತಾಂಶವು ಸಹ  ಹೊರಬಿತ್ತು.. ವೆಂಕಣ್ಣಯ್ಯ ಇಂಗ್ಲಿಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೇ ಲಕ್ಷ್ಮಿಪತಿ ತೇರ್ಗಡೆಯ ಗೆರೆಯ ಹತ್ತಿರವೂ ಸುಳಿದಾಡಲಿಲ್ಲ. ಮುಂದೆ ಹಲವು ಯತ್ನಗಳ ನಂತರವೂ ಲಕ್ಷ್ಮಿಪತಿಗೆ ಸರಸ್ವತಿ ಓಲಿಯಲೆ ಇಲ್ಲ.

ಎಲ್ಲರೂ ಓದುತ್ತಾರೆ, ಆದರೆ ಓದಿದದನ್ನು ಸರಿಯಾಗಿ ಗ್ರಹಿಸಬೇಕು, ಇಲ್ಲದಿದ್ದರೆ ಅಂದು ಎಂದಿಗೂ ಬಳಕೆಗೆ ಬರುವುದಿಲ್ಲ.