Category Archives: ಹಕ್ಕ ಬುಕ್ಕ

ನಮ್ಮ ನಾಡು, ನಮ್ಮ ಹೆಮ್ಮೆ – ದಾರ್ಶನಿಕರು – ೪

ಕನ್ನಡದ ಮೇರು ರಾಜಮನೆತನಗಳೆಲ್ಲ ಅಳಿದ ಮೇಲೆ ಕನ್ನಡ ನಾಡು ಛಿದ್ರ ಛಿದ್ರವಾಯಿತು. ಉತ್ತರದಲ್ಲಿ ದೆಹಲಿ ಸುಲ್ತಾನರು ದಕ್ಷಿಣ ರಾಜ್ಯಗಳ ಮೇಲೆ ದಾಳಿ ಮಾಡಿ ತಮ್ಮ ಸಾರ್ವಭೌಮ ಸ್ಥಾಪಿಸಲು ಯತ್ನಿಸುತ್ತಿದ್ದರು . ಪರಿಸ್ಥಿತಿ ಹೀಗಿರುವಾಗ ದಕ್ಷಿಣದಲ್ಲಿ ಒಂದು ಸಮರ್ಥ ನಾಡನ್ನು ಕಟ್ಟಿ, ತಕ್ಕ ಉತ್ತರವನ್ನು ದೆಹಲಿ ಸುಲ್ತಾನರಿಗೆ ನೀಡುವ ಅವಶ್ಯಕತೆ ಇತ್ತು. ಅಂದು ಕನ್ನಡಿಗರು ಮತ್ತು ಹಿಂದೂಗಳು  ತಮ್ಮ  ಆತ್ಮಗೌರವವನ್ನು ಪಣಕ್ಕಿಟ್ಟು ಕಡೆಯ ಉಸಿರಿರುವವರೆಗೆ ಹೊರಡುವ ಅನಿವಾರ್ಯತೆ ಇತ್ತು. ಇದರ ಸಲುವಾಗಿ ಅಗತ್ಯ ಮಾರ್ಗದರ್ಶನದ ಅನಿವಾರ್ಯತೆ ಇತ್ತು. ಕೇವಲ ಮಹಾ ಗುರುಗಳಿಂದ ಮಾತ್ರ ಸಾಧ್ಯ. ಅಂದು ಕನ್ನಡಿಗರ ಅಳಿದ ಗತ ವೈಭವವನ್ನು ಮತ್ತೆ ಅದೇ ಉತ್ತುಂಗಕ್ಕೆ ಕೊಂಡೊಯ್ದು ಕಲೆ, ಸಾಹಿತ್ಯ , ಸಂಸ್ಕೃತಿ ಮತ್ತು ಸಂಸ್ಕಾರದ ತವರೂರಾದ ಕನ್ನಡ ನಾಡನ್ನು ಕಟ್ಟಿದ ಮಹಾ ಗುರು ಯಾರು ಗೊತ್ತ?

ಅವರೇ ನಮ್ಮ ಅಖಂಡ ಕರ್ನಾಟಕದ ರಾಜ್ಯ ಸಂಸ್ಥಾಪಕರಾದ  ವಿದ್ಯಾರಣ್ಯರು. ಮುಂದೆ ಇವರನ್ನೇ ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂದು ಕನ್ನಡಿಗರು ಹೆಮ್ಮೆಯಿಂದ ಕರೆದರು.

ವಿದ್ಯಾರಣ್ಯರು – ಹಕ್ಕ ಬುಕ್ಕ

ವಿದ್ಯಾರಣ್ಯರ ಮೂಲ ಹೆಸರು ಮಾಧವ, ಇವರ ತಂದೆ ಮಾಯಣಾಚಾರ್ಯರು ತಾಯಿ ಶ್ರಿಮತಿ ದೇವಿ.ಇವರಿಗೆ ಬಹಳ ದಿನಗಳವರೆಗೆ ಮಕ್ಕಳು ಆಗಿರಲಿಲ್ಲ. ಇದಕ್ಕಾಗಿ ಹಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಟ್ಟರು, ಜಪ ತಪಗಳನ್ನು ಮಾಡಿದರು. ಕಡೆಗೆ ಮಗುವಾಯಿತು. ಮಗುವಿಗೆ ಮಾಧವ  ಎಂದು ಹೆಸರಿಟ್ಟರು.  ತುಂಗಾ ಭದ್ರ ನದಿಯ ತೀರದಲ್ಲಿ ಶಂಕರಾನಂದ ಎಂಬ ತಪಸ್ವಿಗಳ ಹತ್ತಿರ  ಪ್ರಾಥಮಿಕ  ಶಿಕ್ಷಣ ಪಡೆದರು. ಮುಂದೆ ಗುರು ಶಂಕರರ ಮಾರ್ಗದರ್ಶನದಂತೆ ಶಂಕರಾನಂದರ ಗುರುಗಳಾದ  ಕಂಚಿಯಲ್ಲಿನ  ಶ್ರೀವಿದ್ಯಾ ತೀರ್ಥರ ಹತ್ತಿರ ವೇದಗಳನ್ನು , ಸಾಹಿತ್ಯ ಕಲೆಗಳನ್ನು ಕಲಿತರು.

ಕಂಚಿಯಲ್ಲಿ ಮಾಧವನು  ವೆಂಕಟನಾಥಾರ್ಯರು, ಸುದರ್ಶನ ಭಟ್ಟರೂ, ಆಕ್ಶೋಭ್ಯ ತೀರ್ಥರನ್ನು ಸ್ನೇಹಿತರನ್ನಾಗಿ ಸಂಪಾದಿಸಿದನು.  ಮಾಧವನಿಗೆ ಬಾಲ್ಯದಿಂದಲೂ ತಾನು ಒಂದು ಮಹಾನ್ ಕಾರ್ಯಕ್ಕಾಗಿ ಹುಟ್ಟಿದ್ದೆನೆಂದು ಅನಿಸುತ್ತಿತ್ತು. ಉತ್ತರದ ಸುಲ್ತಾನರಿಗೆ ಸರಿಯಾಗಿ ಉತ್ತರಿಸಿ ಅವರ ಅನಾಚಾರಗಳಿಗೆ ಸಂಪೂರ್ಣ ತಡೆ ಒಡ್ಡಿ ಹಿಂದೂ ಧರ್ಮವನ್ನು ರಕ್ಷಿಸಿ ಅದೃಶ್ಯವಾದ ಕನ್ನಡಿಗರ ವೈಭವನ್ನು ಮರಳಿ ಸಂಸ್ಥಾಪಿಸುವ ಬಯಕೆ ಮೇಲಿಂದ ಮೇಲೆ ಬೀಳುತ್ತಿತ್ತು. ತನ್ನ ಬಯಕೆಯನ್ನು  ಗುರುಗಳ ಮುಂದೆ ಹೇಳಿದಾಗ ಗುರುಗಳು ” ನೀನು ಸಾಮಾನ್ಯನಲ್ಲ , ನಿನ್ನಿಂದ ನಾಡು ಉದ್ಧಾರವಾಗುತ್ತದೆ “ ಎಂದು ಹೇಳಿದರು.

ಕಂಚಿಯಲ್ಲಿ ಶಿಕ್ಷಣ ಮುಗಿಸಿ ಪಂಪಾಕ್ಷೇತ್ರಕ್ಕೆ ಹಿಂದಿರುಗಿದಾಗ ಪೋಷಕರ ಒತ್ತಾಯದ ಮೇಲೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಇದರಿಂದ ಮನಸ್ಸಿಗೆ ಶಾಂತಿಯೇ ಇಲ್ಲದಂತಾಯಿತು. ಅದರೂ ಅವರ ಜೀವಿತ ಉದ್ದೇಶವು ಆಗಾಗ ಮಾಧವನಿಗೆ ನೆನಪಿಸಿ ತನ್ನ ಕಡೆಗೆ ಸಲೆಯುತ್ತಿತ್ತು .

ಇದೆ ಸಮಯದಲ್ಲಿ ಶ್ರೀರಂಗದ ಶ್ರೀರಂಗನಾಥಸ್ವಾಮಿಯ ದೇವಾಲಯದ ಮೇಲೆ ದೆಹಲಿ ಸುಲ್ತಾನನು ದಾಳಿ ಮಾಡಿ ಊರನ್ನು ದೇವಸ್ಥಾನವನ್ನು ದೋಚಿ ಶ್ರೀರಂಗನಾಥಸ್ವಾಮಿಯ ವಿಗ್ರಹವನ್ನು ಭಂಜಿಸಿದನು. ಸುದ್ದಿಯನ್ನು ತಿಳಿದ ಮಾಧವನು ತಮ್ಮ ಜನರನ್ನು ನಿದ್ರೆಯಿಂದ ಎಚ್ಚರಿಸಿ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಸಂಕಲ್ಪ ಮಾಡಿದನು. ಹಲವರು ಮಾಧವನ ಸಂಕಲ್ಪವನ್ನು ಕೇಳಿ ಕಡೆಗಣನೆ ಮಾಡಿದರು. ಅದರೂ ಅ ದಿನಕ್ಕಾಗಿ ಜನಬಲ , ಧನ ಬಲವಿಲ್ಲದಿದ್ದರು ಆತ್ಮವಿಶ್ವಾಸದಿಂದ ಕಾದು ಕುಳಿತರು. ಕಾರ್ಯ ಸಾಧನೆಗೆ ತನ್ನ ಸಂಸಾರದಿಂದ ಹೊರ ನಡೆಯ ಬೇಕಾಯಿತು. ದೇಶ ಪರ್ಯಟನೆ ಮಾಡಿ ಸೂಕ್ತವಾದ ಸ್ಥಳದ ಅನ್ವೇಷಣೆಯಲ್ಲಿ ಇದ್ದಾಗ ಅವರ ಹೆಂಡತಿಯು ತೀರಿಕೊಂಡಳು. ಕಡೆಗೆ ಸಂಸಾರದಿಂದ ಸಂಪೂರ್ಣ ಬಂಧ  ಮುಕ್ತರಾದರು.

ಗಂಡು ಮೆಟ್ಟಿದ ನಾಡದ ಪಂಪಾ ಕ್ಷೇತ್ರಕ್ಕೆ ಬಂದು ವಿರೂಪಾಕ್ಷ ದರ್ಶನ ಪಡೆದು ಭುವನೇಶ್ವರಿಯ ಸಾಕ್ಷಾತ್ಕಾರಕ್ಕೆ ತಪಸ್ಸು ಆರಂಭಿಸಿದರು. ದಿನದಿಂದ ದಿನಕ್ಕೆ ತಪಸ್ಸು ಉಗ್ರವಾಗುತ್ತ ಹೋಯಿತಾದರೂ ಕನ್ನಡಾಂಬೆಯನ್ನು ಒಲಿಸಿಕೊಳ್ಳಲು ಆಗಲಿಲ್ಲ. ತಾಯಿ ಭುವನೇಶ್ವರಿ ಮಾಧವನಿಗೆ ಹಲವರು ಪರೀಕ್ಷೆಗಳನ್ನು ಒಡ್ಡಿದಳು. ಅದರೂ ಎಲ್ಲವನ್ನೂ ಗೆದ್ದು ಕಡೆಗೆ ದೇವಿಯ ದರ್ಶನ ಪಡೆದರು.

” ನೀನು ಸಕಲ ವಿದ್ಯೆಗಳಲ್ಲೂ ಪಾರಂಗತನಾಗಿ ವಿದ್ಯಾರಣ್ಯ ಎನಿಸಿಕೊಳ್ಳುವೆ. ಕನ್ನಡ ನಾಡಿಗೆ ಬಂದ ದುಸ್ಥಿತಿ ನಿನ್ನಿಂದ ತೊಲಗುತ್ತದೆ. ನಿನ್ನಿಂದ ಲೋಕ ಕಲ್ಯಾಣವಾಗುತ್ತದೆ. ಆದರೆ  ” ಎಂದು ಭುವನೇಶ್ವರಿಯು ಹರಸಿದಳು.

ಆಗ ಅನುಮಾನ ಯಾಕೆ ತಾಯಿ ಎಂದು ಮಾಧವನು ಕೇಳಿದಾಗ.ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತಾಯಿಯು ಹೇಳಲು.
ಆಗ ಮಾಧವನು ನಾನು ಮುಂದಿನ ಜನ್ಮದವರೆಗೂ ಕಾಯಲಾರೆ ಎಂದು ಹೇಳಿದಾಗ. ಭುವನೆಶ್ವರಿಯು ನೀನು ಸನ್ಯಾಸವನ್ನು ಸ್ವೀಕರಿಸಿದರೆ ಮಾತ್ರ ಸಾಧ್ಯ ಎಂದಾಗ ಭುವನೇಶ್ವರಿಯ  ಎದುರಲ್ಲೇ ಸನ್ಯಾಸವನ್ನು ಸ್ವೀಕರಿಸಿ ತಾಯಿಯನ್ನು ಸಂತೃಪ್ತಗೊಳಿಸಿದರು. ಭುವನೇಶ್ವರಿಯು ನಿನ್ನ ಬಯಕೆ ಸಿದ್ದಿಸಲಿ ಎಂದು ಆಶೀರ್ವದಿಸಿ ಕಣ್ಮರೆಯಾದಳು.

ಇದಾದ ಮೇಲೆ ಹಲವು ವರ್ಷಗಳು ಕಳೆದವು . ಕನ್ನಡ ನಾಡಿನ ಕನಸು ಈಡೇರುವ ಲಕ್ಷಣಗಳು ಕಾಣಲಿಲ್ಲ. ಅದರೂ ದಿನವೂ ತಾಯಿ ಭುವನೇಶ್ವರಿಗೆ ಇನ್ನೆಷ್ಟು ದಿನ ಪರೀಕ್ಷಿಸುವೆ ತಾಯಿ ಎಂದು ಕಂಬನಿ ಮಿಡಿಯುತ್ತಿದ್ದರು.

ಹೀಗಿರುವಾಗ ಒಮ್ಮೆ ಸೂರ್ಯೋದಯದ ಸಂದರ್ಭದಲ್ಲಿ ಇಬ್ಬರು ಯುವಕರು ವಿದ್ಯಾರಣ್ಯರ ಆಶ್ರಮಕ್ಕೆ ಬಂದರು. ಇವರನ್ನು ತಾಯಿ ಭುವನೇಶ್ವರಿಯೇ ಕಳುಹಿಸಿ ಕೊಟ್ಟಿದ್ದಾಳೆ ಎಂದು ಅವರನ್ನು ಸ್ವಾಗತಿಸಿದರು. ಅ ಯುವಕರು ಮತ್ತಾರು ಅಲ್ಲ ಹಕ್ಕ ಬುಕ್ಕರು.

ಹಕ್ಕ ಬುಕ್ಕರು ವಿದ್ಯಾರಣ್ಯರನ್ನು ಕುರಿತು ” ನಿಮ್ಮಿಂದ ನಮ್ಮ ಜನ್ಮ ಪುನಿತವಾಯಿತು, ನೀವು ನಮ್ಮನ್ನು ಕಾಪಾಡಬೇಕು ” ಎಂದು ಕೇಳಿಕೊಂಡರು. ಹರಿಹರ ಮತ್ತು ಬುಕ್ಕರು ಯುದ್ದದಲ್ಲಿ  ತಾವು ರಾಜ್ಯವನ್ನು ಕಳೆದು ಕೊಂಡದ್ದು,  ದೆಹಲಿಯ ಸುಲ್ತಾನ ಅವರನ್ನು ಸೆರೆ ಹಿಡಿದು ಅವರ ಬಂಧುಗಳನ್ನು ಕೊಲ್ಲಿಸಿದ್ದನ್ನು, ಕಡೆಗೆ ಯುದ್ದ ಖೈದಿಗಾಳಗಿ ದೆಹಲಿಗೆ ಕರೆದು ಕೊಂಡು ಹೋಗಿದ್ದನ್ನು, ದಕ್ಷಿಣದಲ್ಲಿ ಆರಾಜಕತೆ ಉಂಟಾಗಿ ಸುಲ್ತಾನನು, ಅರಾಜಕತೆಯನ್ನು ಅಡಗಿಸಲು ಹಕ್ಕ ಬುಕ್ಕರನ್ನೇ ಕಳುಹಿಸಿದ್ದು , ಅಲ್ಲಿಂದ ಇವರು ತಪ್ಪಿಸಿಕೊಂಡಿದ್ದು  ಕಡೆಗೆ ತಮ್ಮನ್ನು ಹುಡುಕುತ್ತಿರುವ ಬಗೆಯನ್ನು ವಿವರಿಸಿದರು. ಹರಿಹರ ಬುಕ್ಕರ ಕಷ್ಟವನ್ನು ಕೇಳಿ ಇಬ್ಬರಿಗೂ ಆಶ್ರಯವಿತ್ತು ಹಕ್ಕ ಬುಕ್ಕರಿಗೆ ನೂತನ ರಾಜ್ಯವನ್ನು ಕಟ್ಟುವಂತೆ ಸಂಕಲ್ಪಿಸಿದರು.

ದೆಹಲಿಯ ಸುಲ್ತಾನನಾದ ಮಹಮದ್ ಬಿನ್ ತುಗಲಕ್ ಆನೆಗೊಂದಿಯ ರಾಜನನ್ನು ಸೋಲಿಸಿ ಅರಮನೆಯಲ್ಲಿ ಬಂಧಿಸಿ ಇಟ್ಟು ತನ್ನ ಪ್ರತಿನಿಧಿಯನ್ನುಅನೆಗೊಂದಿಗೆ ನೇಮಿಸಿದನು. ಹಕ್ಕ ಬುಕ್ಕರು ವಿದ್ಯಾರಣ್ಯರ ಆದೇಶದಂತೆ  ದೇಶ ಪ್ರೇಮಿಗಳ ಯುವಕರ ತಂಡವೊಂದನ್ನು ಸಂಘಟಿಸಿ ಉಪಾಯವಾಗಿ ಆನೆಗೊಂದಿ ಕೋಟೆಯನ್ನು ಪ್ರವೇಶಿಸಿ ತುಗಲಕನ ಪ್ರತಿನಿಧಿಯನ್ನು ಕೊಂದು ರಕ್ತಪಾತವಿಲ್ಲದೆ ಅನೆಗೊಂದಿಯನ್ನು ಬಂಧ ಮುಕ್ತಗೊಳಿಸಿದರು.

ಈ  ವಿಜಯದಿಂದ ಪ್ರೇರಣೆ ಪಡೆದು ತುಂಗಾ ಭದ್ರ ನದಿಯ ತೀರದಲ್ಲಿ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕು ಸ್ಥಾಪನೆ ಮಾಡಿದರು. ಇದೆ ಸಮಯದಲ್ಲಿ ನೆಲ ಅಗೆಯುತ್ತಿದ್ದಾಗ ಭಾರಿ ನಿಧಿಯೊಂದು ಸಿಕ್ಕಿತು. ಇದರಿಂದ ರಾಜ್ಯ ಸ್ಥಾಪನೆಗೆ ಅನುಕೂಲವಾಯಿತು. ಹಕ್ಕ ಬುಕ್ಕರಿಗೆ ನೂತನ ನಗರವನ್ನು ವಿದ್ಯಾನಗರವೆಂದು ಕರೆಯುವ ಅಸೆ ಆದರೆ ವಿದ್ಯಾರಣ್ಯರು ಇದನ್ನು ವಿಜಯನಗರ ಎಂದು ಕರೆದರು. ವಿಜಯನಗರ ವೈಭವದ ಬಗ್ಗೆ ಹಿಂದೊಮ್ಮೆ ನಿಮಗೆ ತಿಳಿಸಿ ಕೊಟ್ಟಿದ್ದೆ(ಮರೆತಿದ್ದರೆ ವಿಜಯನಗರದ ಕೊಂಡಿಯನ್ನು ಸ್ಪರ್ಶಿಸಿ).

ವಿಜಯನಗರದ ಸಂಸ್ಥಾಪನೆಯಾದ ನಂತರ ಶೃಂಗೇರಿ ಶಾರದಾ ಪೀಠದ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಸುಮಾರು ೧೧೮  ವರ್ಷ ಜೀವಿಸಿದ್ದ ವಿದ್ಯಾರಣ್ಯರು ಜೀವನವಿಡಿ ಜನರ ಏಳಿಗೆಗೆ ಶ್ರಮಿಸಿದ್ದರು. ಬನ್ನಿ ಒಮ್ಮೆಯಾದರು ನೆನೆಯೋಣ