Monthly Archives: July 2018

ಸಾಫ್ಟ್ವೇರ್ ಇಂಜಿನಿಯರ್ ಪೀಠದಲ್ಲಿ – ಅವರನ್ನು ನೋಡು ಇವರನ್ನು ನೋಡು ಎಂಬ ಪ್ರೇರಣೆಯ ಪೆಡಂಭೂತ

ಯಾವುದೇ ಒಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಒಂದಲ್ಲಾ ಒಂದು ಮೋಟಿವೇಟಿಂಗ್ ಫ್ಯಾಕ್ಟರ್ಸ್ ಕೆಲಸ ಮಾಡುತ್ತವೆ. ಹಿಂದಿನ ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದ ಕಾಯಕದ ವಂಶಋಕ್ಷಕ್ಕೆ ಹೊಸ ರೆಂಬೆಕೊಂಬೆಯನ್ನು ನೀಡಿದ್ದು ಬಹುಶ ಮಾಹಿತಿ ತಂತ್ರಜ್ಞಾನದಲ್ಲಿನ ಕಾರ್ಯಕ್ಷೇತ್ರ. ನಮ್ಮಪ್ಪ ವೈದ್ಯರು ಹಾಗಾಗಿ ನಾನು ಸಹ ವೈದ್ಯನಾಗಬೇಕು, ನಮ್ಮಪ್ಪ ಶಿಕ್ಷಕರು ಹಾಗಾಗಿ ನಾನು ಶಿಕ್ಷಕನಾಗಬೇಕು ಎನ್ನುವ ವಂಶಪಾರಂಪರ್ಯದ ವಂಶವೃಕ್ಷವು ತೆಂಗು ಅಡಿಕೆಯ ಮರದ ಹಾಗೆ ನೇರ ಬೆಳೆಯದೆ ಆಲದ ಮರದ ಹಾಗೆ ಬೆಳೆಯಲು ತೊಡಗಲು ಆರಂಭಿಸಿದ್ದು ಈ ಮಾಹಿತಿ ತಂತ್ರಜ್ಞಾನದ ಕಾರ್ಯಕ್ಷೇತ್ರದಿಂದ .

ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಸೇರಲು ಮೋಟಿವೇಷನ್ ಫ್ಯಾಕ್ಟರ್ಗಳು ಹಲವಾರು, ಬಹುತೇಕರಿಗೆ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕು ಅಂತ ಕನಸು ಚಿಗುರೊಡೆಯುವುದು ಮತ್ತೊಬ್ಬ ಸಾಫ್ಟ್ವೇರ್ ಎಂಜಿನಿಯರ್ ಒಬ್ಬನ ಜೀವನ ಶೈಲಿಯನ್ನು ನೋಡಿಯೇ. ಅವರ ಹಾವಭಾವ, ನಡೆ ನುಡಿ, ವೇಷ ವಿನ್ಯಾಸ,ಕಾರು-ಬಾರು , ಸು-ಲಲಿತ  ಭಾಷೆ, ಕಿಸೆಯಲ್ಲಿನ ಕಾಂಚಾಣ ಅದಕ್ಕಿಂತ ಹೆಚ್ಚಾಗಿ ಎಸಿ ರೂಮಿನೊಳಗಡೆ ಕಂಪ್ಯೂಟರ್ ಎಂಬ ವಿಸ್ಮಯಕಾರಿ ವಿಚಿತ್ರ ಶಕ್ತಿಯೊಂದಿಗೆ ಸರಸ ಸಲ್ಲಾಪದೊಂದಿಗಿನ ಬಾಂಧವ್ಯದ ಜೊತೆಗೆ ಜಗತ್ತಿನ ಬಲಿಷ್ಠ ಶಕ್ತಿಗಳ ಜೊತೆ ಕೈ ಜೋಡಿಸಿ ಮೇರು ಪರ್ವತವನ್ನು ಮುಡಿಗೇರಿಸಿಕೊಂಡವರ ಹಾಗೆ ಬಿಂಕುವ ವಯ್ಯಾರ ನೋಡಿಯೇ  ನಾನು ಏನಾದರೂ ವೃತ್ತಿ ಎಂದು ಅರಿಸಿಕೊಂಡರೆ ಸಾಫ್ಟ್ವೇರ್ ಎಂಜಿನಿಯರ್ ಅಷ್ಟೇ ಎನ್ನುವ ತೀರ್ಮಾನ ಮಾಡಿಯೇ ಬಿಡುತ್ತಾರೆ. ಕೆಲವರಂತೂ ವಿದೇಶಕ್ಕೆ ಹೋಗಲು ಈ ವೃತ್ತಿಯೆ ವೀಸಾ ಪಾಸ್ಪೋರ್ಟ್ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ.

ಮೇಲಿನದು ಸ್ವಯಂಕೃತವಾದರೆ, ಉಳಿದವೆಲ್ಲ ಪೋಷಕರ ಮನದಾಸೆಯನ್ನು ಪೊರೈಸುವ ಮೋಟಿವಟಿಂಗ್ ಫ್ಯಾಕ್ಟರ್ಸ್. ತಮ್ಮ ಸ್ನೇಹಿತನ ಮಗ ಸಾಫ್ಟ್ವೇರ್ ಎಂಜಿನಿಯರ್ ಆಗಿ ದೇಶದ ಬಹುದೊಡ್ಡ ಕಂಪನಿಯಲ್ಲಿ ತಿಂಗಳಾದರೂ ಎಣಿಸಲು ಸಾಕಾಗದೆ ಆಗುವಷ್ಟು ಸಂಬಳ ದುಡಿಯುತ್ತಿದ್ದಾನೆ ಹಾಗಾಗಿ ನೀನು ಸಹ ಸಾಫ್ಟ್ವೇರ್ ಎಂಜಿನಿಯರ್ ಆಗಬೇಕು ಎಂದು ಮಕ್ಕಳಿಗೆ ತಮ್ಮ ಕನಸನ್ನು ಬಿತ್ತುತ್ತಾರೆ.
ಹೆಣ್ಣು ಮಗುವಾದರೆ, ನೋಡಮ್ಮ ಪಕ್ಕದ ಊರನ್ನು ಸಹ ನೋಡದ ನಮ್ಮೂರಿನ ಕಾಳಮ್ಮ, ರಾಜಮ್ಮ , ಬಸಮ್ಮ ಎಲ್ಲರೂ ತಮ್ಮ ಮಗಳ ಹೆರಿಗೆ ಮಾಡಿಸುವುದಕ್ಕೆ ವಿದೇಶಕ್ಕೆ ಹೋಗಿ ಬಂದರು ನೀನು ಸಹ ಎಂಜಿನಿಯರ್ ಆಗು ಎಂದು ತಮ್ಮ ವಾಂಛೆಯನ್ನು ಮಗಳ ಮುಡಿಗೇರಿಸುವರು.

ನೋಡೇ ಪಕ್ಕದ ಮನೆಯವರ ಮಕ್ಕಳು ವಿದೇಶದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಾ ಅಲ್ಲೇ ನೆಲೆಸಿದ್ದಾರೆ ಅಂತೆ ಹಾಗಾಗಿ ಮೂರು ತಿಂಗಳು ವಿದೇಶಕ್ಕೆ ಮಕ್ಕಳನ್ನು ನೋಡೋಕೆ ಹೋಗ್ತಾಇದ್ದಾರೆ ಎಂದು ಮನೆಯ ಯಜಮಾನ ಯಜಮಾನತಿಯ ಜೊತೆ  ಮಕ್ಕಳೆದರು ತಮ್ಮ ಮಕ್ಕಳು ಸಹ ಸಾಫ್ಟ್ವೇರ್ ಎಂಜಿನಿಯರ್ ಆದರೆ ಈ ರೀತಿಯ ಅವಕಾಶ ಸಿಗಬಹುದು ಎಂದು ಮಕ್ಕಳ ಹತ್ತಿರ ದಿನೇ ದಿನೇ ಅವರಿರರು ವಿದೇಶಕ್ಕೆ ಹೋದಾಗಲೆಲ್ಲ ವಾರ್ತೆಯ ವಿವರನ್ನು ಒಪ್ಪಿಸಿ ತಮ್ಮ ಆಸೆಯನ್ನು ತೋಡಿಕೊಳ್ಳುತ್ತಾರೆ. ವಿದೇಶಕ್ಕೆ ಹೋದ ಅಪ್ಪ ಅಮ್ಮಂದಿರು ಹಿಂದಿರುಗಿದಾಗ ಅವರಲ್ಲಾದ ವೇಷ ಭೂಷಣ ಆಶು ಭಾಷಣದ ಬದಲಾವಣೆಗಳನ್ನು ಕಂಡು ನೆರೆಹೊರೆಯರು ಮಕ್ಕಳ ಮುಂದೆ ವಾಚಿಸಿದ್ದೆ ವಾಚಿಸಿದ್ದು.

ಮೂಲೆ ಮನೆಯವರ  ಮಗ ಅವರ ಅಪ್ಪನಿಗೆ ಕಾರು ಕೊಡಿಸಿದನಂತೆ, ಪಕ್ಕದ ಮನೆಯವರ ಮಗ ಅವರಪ್ಪನಿಗೆ  ಸೈಟ್ ಕೊಡಸಿದಾನಂತೆ, ಮೊನ್ನೆಯಷ್ಟೇ ಬಂಗಾರದ ಸರ ಕೊಡಿಸಿದ್ದಳು  ಈಗ ವಜ್ರದ ಓಲೆ ಕೊಡಿಸಿದ್ದಾಳೆ ಅವರ ಮಗಳು, ಎಂದು ಅಕ್ಕ ಪಕ್ಕದ ಮನೆಯವರ ನಡಾವಳಿಗಳ ಬಗ್ಗೆ ಮಕ್ಕಳ ಮುಂದೆ ಹೇಳಿದಾಗ ಮಕ್ಕಳಿಗೆ ಮೋಟಿವೇಷನ್ ಸಿಗದೇ ಇರುತ್ತಾ?

ಹಾಗಾಗಿ ಅವನು ಎಂಜಿನಿಯರ್, ಇವಳು ಎಂಜಿನಿಯರ್ ಎಂಬ ರಕ್ತಬೀಜಾಸುರನನ್ನು  ಬಹುತೇಕ ಪೋಷಕರು ತಮ್ಮ ಮಕ್ಕಳಲ್ಲಿ ಬಿತ್ತಿ ತಮ್ಮ ಮನೆಯಲ್ಲಿರುವವರೆಲ್ಲನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ್ಯವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಇದು ಮನೆ ಮನೆಗೆ ಪಸರಿಸಿ ಕೇರಿ, ಗಲ್ಲಿಯಿಂದ ಹಿಡಿದು ಇಡೀ ಊರಿಗೆ ಸಾಂಕ್ರಾಮಿಕ ರೋಗದ ಸ್ವರೂಪ ಪಡೆದುಕೊಂಡು ಎಲ್ಲರೂ ಒಂದೇ ಸೂರಿನಡಿ ಕಾಯಕದಲ್ಲಿ ತೊಡಗುವಂತೆ ಮಾಡಿದೆ.

ನೀವು ಯಾವ ಗುಂಪಿಗೆ ಸೇರಿದ್ದೀರಾ ಅಂತ ನೀವೇ ಹೇಳಿ