ನಮ್ಮ ನಾಡು , ನಮ್ಮ ಹೆಮ್ಮೆ – ವೀರ ಮಹಿಳೆಯರು – ೨

ಯಾವುದಾದರು ಹೆಣ್ಣು ಮಗಳು ಅಸಾಧಾರಣ ಶೌರ್ಯ ಮತ್ತು ಸಾಹಸ ತೋರಿದರೆ ನಾವೆಲ್ಲ ಅ ಹೆಣ್ಣು ಮಗಳನ್ನು ನೀನು ಜಾನ್ಸಿಯ ರಾಣಿ ಲಕ್ಷ್ಮಿಬಾಯಿ ಎಂದು ತುಲನೆ ಮಾಡಿ ಹುರಿದುಂಬಿಸುತ್ತೇವೆ. ಜಾನ್ಸಿಯ ರಾಣಿ ಲಕ್ಷ್ಮಿಬಾಯಿ ಭಾರತ ಮಾತೆಯ ಅಪ್ರತಿಮ ವೀರ ನಾರಿಯೂ ಹೌದು. ನಾವೆಲ್ಲ  ಅವರನ್ನು ಅಭಿಮಾನದಿಂದ ಪುರಸ್ಕರಿಸಿದ್ದೇವೆ . ಅದರೂ ಭಾರತ ಮಾತೆಯ ಮಗಳಾದ ಕನ್ನಡಮ್ಮನ ಕಲಿಗಳಾದ ನಾವು ನಮ್ಮಲ್ಲೇ  ಹಲವಾರು ವೀರ ನಾರಿಯರು ಇದ್ದರೆಂದು ಮರೆತಿದ್ದೇವೆ. ಬಹುಶ ನಮ್ಮ ಕನ್ನಡಿಗರಿಗೆ  ಅಜ್ಞಾನವೂ  ಅಥವಾ ನಮ್ಮ ಪುರಾತನರ ಮೇಲೆ ಅಭಿಮಾನವಿಲ್ಲವೋ ಏನು!.

ಕೆಳದಿ ಚೆನ್ನಮ್ಮ, 

ನಮ್ಮಲ್ಲೇ ಹಲವರಿದ್ದರು ನಾವು ಜಗತ್ತಿಗೆ ನಮ್ಮವರ ಪರಿಚಯ ಮಾಡಿಕೊಡಲು ಇಂದಿಗೂ ಸಹ ನಾವು ಹಿಂಜರಿಯುತ್ತೇವೆ. ಇನ್ನು ಮುಂದೆ ಅದು ಬೇಡವೆನ್ನುವ ನಮ್ಮವರನ್ನು ಅಳಿವಿಲ್ಲದ ವಿಶ್ವಕ್ಕೆ ಪ್ರಯತ್ನಿಸುವ ಒಂದು ಪ್ರಯತ್ನ ಮಾಡಿ ಹಿಂದಿನ ಲೇಖನದಲ್ಲಿ ನಾನು ರಾಣಿ ಅಬಕ್ಕನ ಬಗ್ಗೆ ಪರಿಚಯ ನಿಮಗೆ ನೀಡಿದ್ದೆ ಇಂದು ಸಹ ನಾನು ನಮ್ಮ ನಾಡು, ನಮ್ಮ ಹೆಮ್ಮೆಯ ಸರಣಿಯಲ್ಲಿ ವೀರ ಮಾತೆಯೋಬ್ಬರ ಬಗ್ಗೆ ಬರೆಯುತ್ತಾ ಇದ್ದೇನೆ. ಲೇಖನ ಓದಿದ ಕಡೆಗೆ ನಿಮ್ಮ ತೀರ್ಪನ್ನು ನನಗೆ ಕಳುಹಿಸಿ ಕೊಡಬೇಕಾಗಿ ವಿನಂತಿ.

ಸಮಸ್ತ ಉತ್ತರ ಭಾರತವನ್ನು ತನ್ನ ತೆಕ್ಕೆಗೆ ತಗೆದುಕೊಂಡು , ಜಗತ್ತನ್ನು ಗೆದ್ದವನು  ಅರ್ಥಾತ್  ” ಅಲಂಗಿರ್ ” ಎಂಬ ಬಿರುದನ್ನು ತಾನೆ ದಯಾಪಾಲಿಸಿಕೊಂಡು , ರಾಜ್ಯದಾಹದ ಅಸೆ ಈಡೇ ರಿಸಿಕೊಳ್ಳುವ ಸಲುವಾಗಿ ಶಿವಾಜಿ ಮಗನಾದ ರಾಜಾರಾಮನಿಗೆ ಆಶ್ರಯ ಕೊಟ್ಟರೆಂಬ  ಕಾರಣಕ್ಕೆ  ತನ್ನ ಬಲಿಷ್ಠ ಸೇನೆಯನ್ನು ಮುನ್ನುಗ್ಗಿಸಿ  ಕನ್ನಡದ ಮಲೆನಾಡಿನ ಚಿಕ್ಕ ಸಂಸ್ಥಾನದ ಮೇಲೆ ಯುದ್ದ ಸಾರಿದನು  ” ಔರಂಗಜೇಬ್ “. ಅದರೂ ಕನ್ನಡದ ಕೆಚ್ಚಿನ ಕಲಿಗಳು ಅವನನ್ನು ತಡೆಯುವಲ್ಲಿ ಯಶಸ್ವಿಯಾಗಿ ಕಡೆಗೆ ಮೊಗಲರ ಸೈನ್ಯ ಸಂಧಾನ ಮಾಡಿಕೊಂಡು ಹಿಂತಿರುಗಿತು.

ಅ ಚಿಕ್ಕ ಸಂಸ್ಥಾನ ಯಾವುದು ಗೊತ್ತೇ, ಯುದ್ದದಲ್ಲಿ ಮುನ್ನೆಡಿಸಿ ಮೊಗಲರಿಗೆ ಸೋಲಿನ ರುಚಿ ತೋರಿಸಿದ ಕನ್ನಡ ರತ್ನ ಯಾವುದು ಗೊತ್ತೇ ?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದಾದ ಮಲೆನಾಡಿನ ಕೆಳದಿಯೇ ಅ ಸಂಸ್ಥಾನ. ಯುದ್ದದಲ್ಲಿ ಮುನ್ನೆಡಿಸಿ ೨೫ ವರ್ಷ ಶಾಂತಿ , ನ್ಯಾಯ ಮತ್ತು ನೀತಿಯಿಂದ ರಾಜ್ಯಭಾರ ಮಾಡಿ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ  ರತ್ನ ” ಚೆನ್ನಮ್ಮ” .

ಚೌಡಪ್ಪನಾಯಕನೇ  ಕೆಳದಿ ಸಂಸ್ಥಾನದ ಮೂಲಪುರುಷ. ನಂತರ ಶಿವಪ್ಪ ನಾಯಕನಿಂದ ಪ್ರಸಿದ್ಧಿ ಹೊಂದಿತು ಅವರು ಶಿಸ್ತಿನ ಶಿವಪ್ಪ ನಾಯಕನೆಂದೇ ಪ್ರಸಿದ್ಧ ರಾದರು ಅವನ ಮಗ ಸೋಮಶೇಖರ ನಾಯಕ ದಕ್ಷ ನಾದ ರಾಜ. ಸೋಮಶೇಖರರು ಪ್ರಾಯಕ್ಕೆ ಬಂದಾಗ ಹಲವಾರು ರಾಜರು ತಮ್ಮ ಮಗಳನ್ನು ಕೊಟ್ಟು ಸಂಬಂಧ ಬೆಳೆಸಲು ಮುಂದಾದರು ಅಗ ಸೋಮಶೇಖರ ನಯವಾಗಿ ತಿರಸ್ಕರಿಸಿದರು. ರಾಜ್ಯದ ಜನತೆ ಇವನು ಮುಂದೆ ಸನ್ಯಾಸಿಯಾಗಿ ಬಿಡುವನು ಏನು ಎಂದು ತಮ್ಮಲ್ಲೇ ಅಡಿಕೊಳ್ಳಲು ಶುರು ಮಾಡಿದರು.

ಹೀಗಿರುವಾಗ  ಒಮ್ಮೆ ಜಾತ್ರೆ ಯಲ್ಲಿ ಸಿದ್ದಪ್ಪ ಶೆಟ್ಟರ ಮಗಳು ಚೆನ್ನಮ್ಮನನ್ನು ಕಂಡನು. ಅವಳ ಲಾವಣ್ಯಕ್ಕೆ ಮಾರುಹೋಗಿ ಅವಳೊಂದಿಗೆ ವಿವಾಹದ ಪ್ರಸ್ತಾಪವನ್ನು ತನ್ನ ಪೂಜ್ಯರ ಮುಂದಿಟ್ಟನು.  ಕಡೆಗೆ ಸಂತೋಷದಿಂದ ಬಿದನೂರಿನ ಅರಮನೆಯಲ್ಲಿ ಸೋಮಶೇಖರ ಮತ್ತು ಚೆನ್ನಮ್ಮರ ವಿವಾಹ ನಡೆಯಿತು. ಚೆನ್ನಮ್ಮ ರಾಣಿಯಾದಳು. ಬುದ್ದಿವಂತೆಯಾದ ಚೆನ್ನಮ್ಮಳು ರಾಜಕಾರಣ, ಶಸ್ತ್ರ ವಿದ್ಯೆ ,ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದರು .

ರಾಜ ಸೋಮಶೇಖರ ಮತ್ತು ರಾಣಿ ಚೆನ್ನಮ್ಮರು ಸುಖವಾಗಿ ರಾಜ್ಯಬಾರ ನಡೆಸುತ್ತಿರುವಾಗ, ಒಮ್ಮೆ ನಾಡ  ಹಬ್ಬದ ಸಮಯದಲ್ಲಿ ಕಲಾವತಿ ಎಂಬ ನರ್ತಕಿಯು ರಾಜ ದಂಪತಿಗಳ ಸಮ್ಮುಖದಲ್ಲಿ ನರ್ತನ ಮಾಡಿದಳು. ಇವಳ ಮಾಯೆಗೆ ಸಿಲುಕಿದ ಸೋಮಶೇಖರ ಇವಳ ದಾಸನದ. ರಾಜ ಅರಮನೆಯನ್ನು ತೊರೆದ. ಕಲಾವತಿಯ ಜೊತೆ ಆಕೆಯ ತಾಯಿ ಮತ್ತು ಸಾಕು ತಂದೆ ಭರಮೆ ಮಾವುತ ಜೊತೆಗಿರುತ್ತಿದ್ದರು. ಕಪಟಿಯಾದ  ಭರಮೆ ಮಾವುತ  ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯನ್ನು ವಶಪಡಿಸಿಕೊಳ್ಳುವ ಮಹಾ ಯೋಜನೆ ಸಿದ್ದಪಡಿಸಿದ. ಇದೆ ಸಮಯದಲ್ಲೇ ಬಿಜಾಪುರದ ಸುಲ್ತಾನನು ಕೆಳದಿಗೆ ಮುತ್ತಿಗೆ ಹಾಕಲು ಬಂದನು. ಕಡೆಗೆ ರಾಣಿ ಚೆನ್ನಮ್ಮಳು ರಾಜನ್ನು ಅರಮನೆಗೆ ಬರುವಂತೆ ಬೇಡಿಕೊಂಡಳು. ಆದರೆ ಭರಮೆ ಮಾವುತನ ಮಾತಿಗೆ ಮರುಳಾದ ರಾಜ ಚೆನ್ನಮ್ಮನ ಮಾತನ್ನು ತಿರಸ್ಕರಿಸಿದನು. ಶತ್ರುಗಳು ರಾಜ್ಯವನ್ನು ಸುತ್ತುವರಿದಿದ್ದರು ರಾಣಿಗೆ ಯಾವುದೇ ದಾರಿ ತೋಚದೆ ತಾನೆ ಖುದ್ದಾಗಿ ನಿಂತು ಖಡ್ಗವನ್ನು ಹಿಡಿದು ಸೇನೆ ಮುನ್ನೆಡೆಸುವ ಸಂದರ್ಭ ಬಂದಾಗ ಅವರ ರಾಜ್ಯದವರೇ ಅದ ಹಲವರ ವಿರೋಧ ಎದುರಿಸಬೇಕಾಯಿತು.

ಹಲವರು ನಾವು ಹೇಳಿದ ವ್ಯಕ್ತಿಯನ್ನೇ ಪಟ್ಟಕ್ಕೆ ತರಬೇಕು, ಇಲ್ಲವಾದರೆ ನಾವೇ ಜನರನ್ನು ನಿಮ್ಮ ವಿರುದ್ದ ದಂಗೆ ಎಬ್ಬಿಸುತ್ತೇವೆ ಎಂದು ಎಚ್ಚರಿಸಿದರು. ಅತ್ತ ಕಡೆ ಧರಿ ಇತ್ತ ಕಡೆ ಪುಲಿ ಎರಡು ಅಪಾಯವೇ ಸರಿ ಎಂದು ಯೋಚಿಸಿ ತಮಗೆ ಮಕ್ಕಳು ಇಲ್ಲದೆ ಇದ್ದುದರಿಂದ ಬಸಪ್ಪ ನಾಯಕ ಎಂಬ ಹುಡುಗನನ್ನು ದತ್ತು ತಗೆದು ಕೊಂಡಳು.

ಕೆಳದಿ ತನ್ನ ಕೈ ವಶವಾಯಿತು ಎನ್ನುವ ಉತ್ಸಾಹದಲ್ಲಿದ ಬಿಜಾಪುರದ ಸುಲ್ತಾನ ತನ್ನ ರಾಯಭಾರಿಯಾದ  ಜನ್ನೋಪಂತನನ್ನು ಕೆಳದಿಗೆ ಕಳುಹಿಸಿ ಕೊಟ್ಟನು. ಸುಲ್ತಾನನ ಕುಟಿಲತನವನ್ನು ಅರಿತಿದ್ದ ಚೆನ್ನಮ್ಮ ಯುದ್ದ ಮಾಡುವ ಯೋಜನೆಯನ್ನು ಬಿಟ್ಟಿದ್ದಳು. ಮೂರು ಲಕ್ಷ  ರೊಪಾಯಿ ಹಣ ಕೊಟ್ಟು ಒಪ್ಪಂದ ಮಾಡಿಕೊಂಡು ವಾಪಸು ಕಳುಹಿಸಿದ್ದಳು. ಆದರೂ  ಸುಲ್ತಾನ  ತನ್ನ ಸೈನ್ಯವನ್ನು ಕೆಳದಿ ಕಡೆಗೆ ಮುನ್ನುಗ್ಗಿಸಿದ.

ರಾಣಿಯನ್ನು ಕಂಡ ಜನ್ನೋಪಂತ ನಂತರ ಭರಮೆ ಮಾವುತನನ್ನು ಕಂಡನು . ರಾಜ ಸೋಮಶೇಖರನನ್ನು  ಭರಮೆ ಮಾವುತನ ಕೈಯಿಂದ ಕೊಲ್ಲಿಸಿದನು.

ಚೆನ್ನಮ್ಮ ತನ್ನ ಜನರನ್ನು ಉದ್ದೇಶಿಸಿ “ವೀರ ಕನ್ನಡಿಗರೇ, ಶೂರ ಸೈನಿಕರೇ ಇಂದು ಈ ರಾಜ್ಯದ ಅಳಿವು ಉಳಿವು ನಿಮ್ಮ ಕೈಯಲ್ಲಿದೆ.  ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ” ಎಂಬ ಅಮರವಾಣಿಯೊಂದಿಗೆ  ಹುರಿದುಂಬಿಸಿದಳು. ಬಿಜಾಪುರದ ಸೈನ್ಯದ ಮೇಲೆ ಶೌರ್ಯದಿಂದ ಹೋರಾಡಿದರು ಜಯ ಲಭಿಸಲಾರದು ಎಂದು ಚೆನ್ನಮ್ಮ ಬಿದನೂರನ್ನು ಬಿಡಬೇಕಾಯಿತು. ಬೇರೆ ಮಾರ್ಗವಿಲ್ಲದೆ, ರಾಜ್ಯ ಭಂಡಾರದ ಸಂಪತ್ತನ್ನು, ಬೆಲೆಯುಳ್ಳ ವಸ್ತುಗಳನ್ನು ಭುವನಗಿರಿಗೆ ಸಾಗಿಸಿದಳು  ಶತ್ರುಗಳು ಬಂದಾಗ ಅವರು ಖಾಲಿಯಾದ ಭಂಡಾರವನ್ನು ಕಂಡು ನಿರಾಸೆಯಾದರು.

ದತ್ತು ಪ್ರಕರಣದ ಸಮಯದಲ್ಲಿ ರಾಣಿಗೂ ಅವರ ಪ್ರಧಾನಿಗೂ ವಿರಸವಾಗಿ ಪ್ರಧಾನಿ ತಿಮ್ಮಣ್ಣ ನಾಯಕ ರಾಣಿಯನ್ನು ಬಿಟ್ಟು ಹೋಗಿದ್ದನು. ಬಿದನೂರು ಸುಲ್ತಾನ ವಶವಾಯಿತು ಎಂದು ಅರಿತ ದೇಶಾಭಿಮಾನಿ ತಿಮ್ಮಣ್ಣ ರಾಣಿಯನ್ನು ಭೇಟಿ ಮಾಡಿ  ತನ್ನ ತಪ್ಪನ್ನು ಮನ್ನಿಸಬೇಕೆಂದು ಬಿನ್ನಹವಿತ್ತು ರಾಣಿಯ ಜೊತೆ ಕೊಡಿಕೊಂಡು ಮತ್ತೆ ಬಿದನೂರು ಕೋಟೆಗೆ ಮುತ್ತಿಗೆ ಹಾಕಿದರು. ದಟ್ಟವಾದ ಕಾಡಿನಲ್ಲಿ ಚೆನ್ನಮ್ಮನ ಕೈಗೆ ಸಿಕ್ಕ ಸುಲ್ತಾನನ ಸೈನ್ಯ ನುಚ್ಚು ನೊರಾಯಿತು. ಬಿದನೂರು ಮತ್ತೆ ಚೆನ್ನಮ್ಮರ ವಶವಾಯಿತು. ಸರ್ವಾನುಮತದಿಂದ ಕೆಳದಿಯ ಪ್ರಜೆಗಳು ರಾಣಿಯ ಆಡಳಿತವನ್ನು ಒಪ್ಪಿಕೊಂಡರು.

ಹಿಂದೆ ಕೆಳದಿಯ ಅರಸರಿಗೂ ಮೈಸೂರು ಅರಸರಿಗೂ ಹಲವಾರು ಬಾರಿ ಯುದ್ಧವಾಗಿತ್ತು. ಮೈಸೂರು ಅರಸರು ಯುದ್ದದಲ್ಲಿ ಸೋಲನ್ನು ಅನುಭವಿಸಿದ್ದರು. ಕೆಳದಿಯ ರಾಜ್ಯವು ಹೆಣ್ಣು ಮಗಳ ಕೈಯಲ್ಲಿದೆ ಎಂದು ಅರಿತು ಸುಲಭವಾಗಿ ಗೆಲ್ಲಬಹುದು ಎಂದು ಊಹೆ ಮಾಡಿದರು . ಆಗ ಕೆಳದಿಯ ರಾಜಮನೆತನಕ್ಕೆ ಸೇರಿದ ವೆಂಕಟನಾಯಕನು ಕೆಳದಿ ನನಗೆ ಸೇರಿದ್ದು. ರಾಣಿಯು ನನಗೆ ಅವಕಾಶ ಕೊಡಲಿಲ್ಲ. ನೀವು ನನಗೆ ಸಹಾಯ ಮಾಡಿದರೆ ನಾನು ನಿಮಗೆ ಅರ್ಧ ರಾಜ್ಯವನ್ನು ಕೊಡುತ್ತೇನೆ ಎಂದು ಪತ್ರ ಬರೆದು ತಿಳಿಸಿದನು.

ಪತ್ರ ಓದಿದ ಅರಸರು ಕೆಳದಿ ಗೆದ್ದರೆ ಪರದೇಶದ ವ್ಯಾಪಾರವು ತಮ್ಮದಾಗುವುದು  ಎಂದು ತನ್ನ ಸೈನ್ಯವನ್ನು ಯುದ್ದಕ್ಕೆ ಕಳುಹಿಸಿದರು. ಇದೆ ಸಮಯದಲ್ಲಿ ಸೋದೆ, ಶಿರಸಿ ಮತ್ತು ಬನವಾಸಿಗಳ ಪಾಳೆಗಾರರು ಕೆಳದಿಯ ಮೇಲೆ ಯುದ್ಧ ಸಾರಿದರು. ರಾಣಿ ಅಂಜಲಿಲ್ಲ ಧೈರ್ಯದಿಂದ ಸೈನ್ಯವನ್ನು ಮುನ್ನಡೆಸಿ ಎಲ್ಲರನ್ನೂ ಸೋಲಿಸಿದಳು.ಸೆರೆ ಸಿಕ್ಕ ಮೈಸೂರಿನ ಸೈನ್ಯಾಧಿಕಾರಿಗಳನ್ನು ಗೌರವದಿಂದ ಕಂಡು ಬಿಡುಗಡೆ ಮಾಡಿದಳು. ಇದರಿಂದ ಮೈಸೂರು ಮತ್ತು ಕೆಳದಿ ರಾಜರಲ್ಲಿ ಸ್ನೇಹದ ಒಪ್ಪಂದವಾಯಿತು.

 ಒಮ್ಮೆ ರಾಣಿ ಎಂದಿನಂತೆ ದಾನ ಮಾಡುತ್ತಿದ್ದಾಗ  ಮೂರು ತೇಜಸ್ವಿ ಜಂಗಮರನ್ನು ಕಂಡು ಬೆರಗಾದಳು. ವಿಚಾರಿಸಿದಾಗ ಅವರಲ್ಲಿ ಒಬ್ಬ ಶಿವಾಜಿಯ ಮಗ ರಾಜಾರಾಮನೆಂದು ತಿಳಿಯಿತು. ಹಲವು ದೊಡ್ಡ ಸಂಸ್ಥಾನಗಳು ಔರಂಗಜೇಬನ ಕೋಪಕ್ಕೆ ಹೆದರಿ ಇವನಿಗೆ ರಕ್ಷಣೆ ನೀಡದ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಮಹಾರಾಜರ ಮಗನಿಗೆ ರಕ್ಷಣೆ ಕೊಡುವುದು ನಮ್ಮಲ್ಲಿ ಪ್ರತಿಯೊಬ್ಬನ ಕರ್ತವ್ಯ ವಾಗಿದೆ ಎಂದು ಹೇಳಿ ರಾಜರಾಮನಿಗೆ ರಕ್ಷಣೆ  ನೀಡಿದಳು ಇದನ್ನು ಅರಿತ ಔರಂಗಜೇಬನ ಕೆಳದಿಯತ್ತ ತನ್ನ ಬೃಹತ್  ಸೇನೆ ಕಳುಹಿಸಿಕೊಟ್ಟನು. ಮಲೆನಾಡಿನ ಮಳೆಯಲ್ಲಿ ಅವರ ಸೈನ್ಯ ಕೆಳದಿಯ ಸೈನ್ಯದ ಮೇಲೆ ಹೋರಾಡಲು ಪರಿಶ್ರಮಿಸಿತು.  ಆಗ ರಾಣಿಯು ರಾಜಾರಾಮನನ್ನು ಜಿಂಜಿ ಕೋಟೆಗೆ ಸ್ಥಳಾಂತರಿಸಿದಳು .ರಾಜರಾಮನು ಜಿಂಜಿ ಕೋಟೆಯಲ್ಲಿರುವುದನ್ನು ಅರಿತ ಮೊಗಲರು ಕೆಳದಿಯ ಮೇಲೆ ಯುದ್ಧ ನಿಲ್ಲಿಸಿ ಒಪ್ಪಂದ ಮಾಡಿಕೊಂಡು  ಜಿಂಜಿಯ ಕಡೆಗೆ ಹೊರಟರು. ಔರಂಗಜೇಬನು ರಾಣಿ ಚೆನ್ನಮ್ಮ ಸ್ವತಂತ್ರಳು ಎಂದು ಮನ್ನಣೆ ಕೊಟ್ಟು ಗೌರವಿಸಿದನು. ಔರಂಗಜೇಬನೊಂದಿಗೆ ಯುದ್ಧ ಮಾಡಿ ಜಯ ಪಡೆದ ಮೊದಲ ಗೌರವ ವೀರ ಕನ್ನಡತಿ  ರಾಣಿ ಚೆನ್ನಮ್ಮ.

೧೬೭೧ ರಿಂದ ೧೬೯೬ ರವರೆಗೆ ಧರ್ಮದಿಂದ ದಕ್ಷತೆಯಿಂದ ರಾಜ್ಯವಾಳಿ, ಕೀರ್ತಿ ವೈಭವಗಳಿಂದ ಬಾಳಿ  ಕಡೆಗೆ ರಾಜ್ಯವನ್ನು ದತ್ತು ಪುತ್ರನಿಗೆ ಒಪ್ಪಿಸಿ  ಶಿವ ಚಿಂತನೆಯಲ್ಲಿ ತೊಡಗಿದರು. ಇಂದಿಗೂ ಸಹ ಕರ್ನಾಟಕದ ಇತಿಹಾಸದಲ್ಲಿ ವೀರ ರಾಣಿ ಕೆಳದಿಯ ಚೆನ್ನಮ್ಮನ ಹೆಸರು ಸುವರ್ಣಕ್ಷಾರಗಳಲ್ಲಿ ಕಂಗೊಳಿಸುತ್ತಿದೆ.

ನಮ್ಮ ಕನ್ನಡಿಗರು ಕಸವರದ ಬೆಲೆ ಮೂವತ್ತು ಸಾವಿರ ದಾಟಿದರು ಇನ್ನೂ ಉತ್ತರದ ಕಡೆ ನೋಡುತ್ತಿರುವುದು ವಿಪರ್ಯಾಸ….


4 responses to “ನಮ್ಮ ನಾಡು , ನಮ್ಮ ಹೆಮ್ಮೆ – ವೀರ ಮಹಿಳೆಯರು – ೨

Leave a comment